ಅಧಿಕಾರಿಗಳ ವಿರುದ್ಧ ಬಿ.ಎಸ್. ಯಡಿಯೂರಪ್ಪ ಗುಡುಗು

ಶಿವಮೊಗ್ಗ, ಆ. 13: ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೆಲ ಅಧಿಕಾರಿ ಹಾಗೂ ಇಲಾಖೆಗಳ ಕಾರ್ಯವೈಖರಿಯ ಬಗ್ಗೆ ಲೋಕಸಭಾ ಸದಸ್ಯ ಬಿ.ಎಸ್.ಯಡಿಯೂರಪ್ಪರವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಅಧಿಕಾರಿಗಳು ನಿರೀಕ್ಷಿತ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಇನ್ನು ಮುಂದಾದರೂ ಸಮರ್ಪಕವಾಗಿ ಕೆಲಸ ಮಾಡಿ. ಕೇಂದ್ರ ಸರಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವತ್ತ ಗಮನಹರಿಸಿ. ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಣೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕತ್ತೆ ಕಾಯುತಿದ್ದಾರಾ?: ಹೊಸನಗರ ತಾಲೂಕಿನ ಬುಕ್ಕಿವಾರೆ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ)ಯಡಿ ಕೈಗೆತ್ತಿಕೊಂಡಿರುವ ರಸ್ತೆ ಕಾಮಗಾರಿಯಲ್ಲಿ ನಿರ್ಮಿಸಲಾಗಿರುವ ತಡೆಗೋಡೆಯು ಕುಸಿದು ಬಿದ್ದಿದೆ. ಸಮರ್ಪಕವಾಗಿ ಕಾಮಗಾರಿಯ ಅನುಷ್ಠಾನವಾಗುತ್ತಿಲ್ಲವೆಂದು ಹೊಸನಗರ ತಾಪಂ ಅಧ್ಯಕ್ಷ ವಾಸಪ್ಪಗೌಡರವರು ದೂರಿದರು. ಪಿಎಂಜಿಎಸ್‌ವೈ ಭಾಗದ ಅಧಿಕಾರಿಯು ಇದಕ್ಕೆ ಸಮರ್ಪಕ ಉತ್ತರ ನೀಡಲಿಲ್ಲ. ಬಿ.ಎಸ್.ವೈ. ಮಾತನಾಡಿ,ಸಂಬಂಧಿಸಿದ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದೀರಾ? ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಅಧಿಕಾರಿ ತಡಬಡಾಯಿಸಿದರು. ಇದರಿಂದ ಆಕ್ರೋಶಗೊಂಡ ಬಿ.ಎಸ್.ವೈ.ರವರು ಅಧಿಕಾರಿಯ ವಿರುದ್ಧ ಹರಿಹಾಯ್ದರು. ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿಲ್ಲವೇ? ಪ್ರತಿಯೊಂದನ್ನೂ ಜನಪ್ರತಿನಿಧಿಗಳೇ ಹೇಳಿ ಮಾಡಿಸಬೇಕಾ? ಬುಕ್ಕಿವಾರೆ ಗ್ರಾಮದ ಕಾಮಗಾರಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ. ಎಲ್ಲವೂ ಸರಿಯಾಗಿದ್ದಲ್ಲಿ ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಬೇಕು. ಈ ಕುರಿತಂತೆ ತಮಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗೆ ಸೂಚಿಸಿದರು. ನಾಚಿಕೆಯಾಗಲ್ವಾ?: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಯಡಿ ಕ್ಲೈಮ್ ಮಾಡಿಸಿದ ರೈತರ ಸಂಖ್ಯೆ ಕಡಿಮೆಯಿರುವುದಕ್ಕೆ ಬಿ.ಎಸ್.ವೈ.ಅವರು ಕೃಷಿ ಇಲಾಖೆಯ ಅಧಿಕಾರಿ ಮಧುಸೂಧನ್‌ರವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಆಕ್ರೋಶದಿಂದ, ನಿಮ್ಮ ಇಲಾಖೆಗೆ ನಾಚಿಕೆಯಾಗಲ್ವಾ? ಎಂದು ಹರಿಹಾಯ್ದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಜಿಲ್ಲಾಧಿಕಾರಿ .ಪಿ.ಇಕ್ಕೇರಿ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರ ಡಿ. ಚೆನ್ನಣ್ಣನವರ್ ಉಪಸ್ಥಿತರಿದ್ದರು.





