ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ
ಮಂಗಳೂರು, ಆ. 13: ಮದ್ಯವ್ಯಸನಿಯಾಗಿದ್ದ ವ್ಯಕ್ತಿಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕುಂಜತ್ತಬೈಲ್ ನಿವಾಸಿ ಪ್ರಕಾಶ್ (38) ಎಂಬವರೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.
ಶುಕ್ರವಾರ ರಾತ್ರಿ ಊಟ ಮಾಡಿ ಮಲಗಿದ್ದ ಪ್ರಕಾಶ್ ತಡರಾತ್ರಿ ವೇಳೆಯಲ್ಲಿ ತಾನು ಧರಿಸಿದ್ದ ಲುಂಗಿಯಿಂದಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಮಗು ಅಳುತ್ತಿರುವುದನ್ನು ಕಂಡು ಎಚ್ಚರಗೊಂಡ ಮನೆಮಂದಿ ನೋಡಿದಾಗ ಪ್ರಕಾಶ್ ನೇಣು ಬಿಗಿದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಪ್ರಕಾಶ್‌ರ ಕಿರಿಯ ಸಹೋದರ ಶೇಖರ್ ಮತ್ತು ನೆರೆಯ ಮನೆಯವರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಮೃತಪಟ್ಟಿರುವುದಾಗಿ ವೆದ್ಯರು ಘೋಷಿಸಿದ್ದಾರೆ.
ತೀವ್ರ ಕುಡಿತದ ಚಟವನ್ನು ಹೊಂದಿದ್ದ ಪ್ರಕಾಶ್ ಕೆಲವು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರೆಂದು ಹೇಳಲಾಗಿದೆ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





