ಕೇಂದ್ರದ ಹೊಸ ಶಿಕ್ಷಣ ನೀತಿ ಪುರೋಹಿತಶಾಹಿಗೆ ಪೂರಕ: ಪ್ರೊ.ಹರಗೋಪಾಲ್
‘ರಾಷ್ಟ್ರೀಯ ಶಿಕ್ಷಣ ನೀತಿ-ಒಂದು ವಿಮರ್ಶಾತ್ಮಕ ವಿಶ್ಲೇಷಣೆ’ ಕುರಿತ ವಿಚಾರ ಸಂಕಿರಣ

ಬೆಂಗಳೂರು, ಆ.13: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಶಿಕ್ಷಣ ನೀತಿ ಪುರೋಹಿತಶಾಹಿ ಹಾಗೂ ಬಂಡವಾಳಶಾಹಿಗಳಿಗೆ ಪೂರಕವಾಗಿದ್ದು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಮಾರಕವಾ ದುದ್ದಾಗಿದೆ ಎಂದು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ಸಮಿತಿಯ ಸದಸ್ಯ ಪ್ರೊ.ಹರಗೋಪಾಲ್ ವಿಶ್ಲೇಷಿಸಿದ್ದಾರೆ.
ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ನಗರದ ಆರ್.ಸಿ.ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-ಒಂದು ವಿಮರ್ಶಾತ್ಮಕ ವಿಶ್ಲೇಷಣೆ’ ಕುರಿತು ವಿಷಯ ಮಂಡಿಸಿದ ಅವರು, ಪುರೋಹಿತಶಾಹಿಗಳು ತಮ್ಮ ತಾರತಮ್ಯದ ಸಿದ್ಧಾಂತವನ್ನು ಶಿಕ್ಷಣ ಕಾಯ್ದೆಯ ಮೂಲಕ ಜಾರಿ ಮಾಡಲು ಹೊರಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಹೊಸ ಶಿಕ್ಷಣ ನೀತಿಯನ್ನು ಗಮನಿಸಿದರೆ ಗಾಬರಿ ಹುಟ್ಟಿಸುವಂತಿದೆ. ಪರಂಪರಾಗತವಾಗಿ ರೂಢಿಯಲ್ಲಿದ್ದ ಜಾತಿಯಾಧಾರಿತ ಉಪ ಕಸುಬುಗಳನ್ನು ಆಯಾ ಜಾತಿಯ ಮಕ್ಕಳು ಕೈಗೊಳ್ಳಲು ಸಹಾಯಕವಾಗುವಂತೆ ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ತಿದ್ದುಪಡಿ ತರಲು ಹೊರಟಿದೆ ಎಂದು ತಿಳಿಸಿದರು.
ದೇಶದ ಜನತೆಗೆ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯ ಪಾಠ ಮಾಡುತ್ತಿರುವ ಕೇಂದ್ರ ಸರಕಾರ 200 ವಿದೇಶಿ ವಿಶ್ವವಿದ್ಯಾನಿಲ ಯಗಳ ಸ್ಥಾಪನೆಗೆ ಅನುಮತಿ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಚಿವರು ಕೇವಲ ಭಾಷಣಗಳಲ್ಲಿ ದೇಶ ಭಕ್ತಿಯ ಘೋಷಣೆಗಳನ್ನು ಕೂಗುತ್ತಲೇ ಮರೆಯಲ್ಲಿ ದೇಶ ದ್ರೋಹದ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದರು.
ಶಿಕ್ಷಣದ ಬಹುಮುಖ್ಯ ಉದ್ದೇಶಗಳಾದ ಸಾಮಾಜಿಕ ಜವಾಬ್ದಾರಿ, ದೇಶದ ಅಭಿವೃದ್ಧಿ ಹಾಗೂ ಸೃಜನಾತ್ಮಕ ಬೆಳವಣಿಗೆಗೆ ಕೇಂದ್ರದ ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ನಿರ್ದಿಷ್ಟವಾದ ಪ್ರಸ್ತಾಪವಿಲ್ಲ. ವಿದ್ಯಾರ್ಥಿಗಳನ್ನು ಕೇವಲ ಮಾರುಕಟ್ಟೆಗೆ ಅಗತ್ಯವಾದ ಉತ್ಪನ್ನಗಳ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತಹ ಶಿಕ್ಷಣವನ್ನು ಮಾತ್ರ ನೀಡುವಂತಹದ್ದಾಗಿದೆ ಎಂದು ಅವರು ಹೇಳಿದರು.
ದೇಶದಲ್ಲಿ ಜಾತಿಯ ಹೆಸರಿನಲ್ಲಿ ದಲಿತ ಸಮುದಾಯದ ಮೇಲೆ ಹಲ್ಲೆಗಳು ನಡೆಯುತ್ತಿವೆ. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಪಾತಾಳಕ್ಕೆ ಇಳಿದಿದೆ. ಇದೆಲ್ಲವುಗಳ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವ ನರೇಂದ್ರ ಮೋದಿ ದೇಶವನ್ನು ಅವನತಿಗೆ ತಲುಪಿಸುವಂತಹ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಹೊರಟಿದ್ದಾರೆ. ಹೀಗಾಗಿ ಜನತೆ ಈ ಶಿಕ್ಷಣ ನೀತಿಯನ್ನು ಒಕ್ಕೊರಲಿನಿಂದ ವಿರೋಧಿಸಬೇಕು ಎಂದು ಅವರು ಹೇಳಿದರು.
ಸಮಾಜ ಶಿಕ್ಷಣಕ್ಕಾಗಿ ಜನಾಂದೋಲನದ ಮುಖಂಡ ಶ್ರೀಪಾದ್ ಮಾತನಾಡಿ, ಕೇಂದ್ರ ಜಾರಿ ಮಾಡಲು ಹೊರಟಿರುವ ಹೊಸ ಶಿಕ್ಷಣ ನೀತಿಯನ್ನು ಕೇವಲ 5 ತಿಂಗಳಲ್ಲಿ ಮಾಡಿ ಮುಗಿಸಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ದೇಶದ ಭವಿಷ್ಯವನ್ನು ರೂಪಿಸಲು ಬಹುಮುಖ್ಯವಾದ ಶಿಕ್ಷಣ ನೀತಿಯ ಕರಡನ್ನು ಆತುರವಾಗಿ ರೂಪಿಸಿರುವುದನ್ನು ಗಮನಿಸಿದರೆ ಕೇಂದ್ರ ಸರಕಾರಕ್ಕೆ ದೇಶದ ಅಭಿವೃದ್ಧಿ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ತಿಳಿಸಿದರು.
ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ರೂಪಿಸಿರುವ ಸಮಿತಿಯಲ್ಲಿ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳು, ಸಂಸತ್ ಕಾರ್ಯ ದರ್ಶಿಗಳನ್ನು ಸೇರಿಸಿಕೊಂಡು ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಿ ದೆ. ಈ ಸಮಿತಿಯಿಂದ ಶಿಕ್ಷಣ ತಜ್ಞರನ್ನು ಹೊರಗಿಡ ಲಾಗಿದೆ. ಹೀಗಾಗಿ ಯಾವುದೆ ಕಾರಣಕ್ಕೂ ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅವರು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಪ್ರೊ.ಮಧು ಪ್ರಸಾದ್, ಆರ್.ಸಿ.ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ವಿ.ನಂದವಾಡಿಗಿ, ಪ್ರಾಧ್ಯಾಪಕ ಪ್ರೊ.ಕೃಷ್ಣಪ್ಪ, ದಸಂಸ ಅಧ್ಯಕ್ಷ ಮಾವಳ್ಳಿ ಶಂಕರ್ ಉಪಸ್ಧಿತರಿದ್ದರು.
ಕೇಂದ್ರ ಸರಕಾರ ಜಾರಿ ಮಾಡಲು ಹೊರಟಿರುವ ಹೊಸ ಶಿಕ್ಷಣ ನೀತಿಯನ್ನು ಗಮನಿಸಿದರೆ ಗಾಬರಿ ಹುಟ್ಟಿಸುವಂತಿದೆ. ಶಿಕ್ಷಣದ ಬಹುಮುಖ್ಯ ಉದ್ದೇಶಗಳಾದ ಸಾಮಾಜಿಕ ಜವಾಬ್ದಾರಿ, ದೇಶದ ಅಭಿವೃದ್ಧಿ ಹಾಗೂ ಸೃಜನಾತ್ಮಕ ಬೆಳವಣಿಗೆಗೆ ಕೇಂದ್ರದ ಹೊಸ ಶಿಕ್ಷಣ ನೀತಿಯಲ್ಲಿ ಯಾವುದೇ ನಿರ್ದಿಷ್ಟವಾದ ಪ್ರಸ್ತಾಪವಿಲ್ಲ. ವಿದ್ಯಾರ್ಥಿಗಳನ್ನು ಕೇವಲ ಮಾರುಕಟ್ಟೆಗೆ ಅಗತ್ಯವಾದ ಉತ್ಪನ್ನಗಳ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವಂತಹ ಶಿಕ್ಷಣವನ್ನು ಮಾತ್ರ ನೀಡುವಂತಹದ್ದಾಗಿದೆ.
-ಪ್ರೊ.ಹರಗೋಪಾಲ್, ಸದಸ್ಯರು, ಶಿಕ್ಷಣ ಹಕ್ಕಿಗಾಗಿ ಅಖಿಲ ಭಾರತ ಸಮಿತಿ







