ಗಾಂಧಿಗಿರಿ ಹೋರಾಟಕ್ಕೆ ಕ್ಯಾರೇ ಎನ್ನದ ಬಾಷ್ ಕಂಪೆನಿ
263 ಕಾರ್ಮಿಕರ ಹೋರಾಟಕ್ಕೆ ವರ್ಷ

ಬೆಂಗಳೂರು,ಆ.13: ಇಡೀ ದೇಶ 70ನೆ ಸ್ವಾತಂತ್ರೋತ್ಸವ ಸಂಭ್ರಮಾಚರಣೆಯ ಗುಂಗಿನಲ್ಲಿದೆ. ಆದರೆ ಕಳೆದ ಆ.15ರಂದು ನಗರದ ಆಡುಗೋಡಿನಲ್ಲಿನ ಬಾಷ್ ಕಂಪೆನಿಯಿಂದ ಅನ್ಯಾಯವಾಗಿ ಹೊರಬಿದ್ದಿರುವ 263 ಮಂದಿ ಕಾರ್ಮಿಕರ ಕುಟುಂಬ ಗಳಿಗೆ ಸೂತಕದ ವಾತಾವರಣ.
ಕಳೆದ ಸ್ವಾತಂತ್ರೋತ್ಸವ ಸಂಭ್ರಮದಲ್ಲಿ ಜರ್ಮನಿ ಮೂಲದ ಮೈಕೋ ಬಾಷ್ ಕಂಪೆನಿಯಲ್ಲಿ ಹತ್ತು ವರ್ಷಗಳಿಂದ ದುಡಿದ 263 ಹಂಗಾಮಿ ಕಾರ್ಮಿಕರಿಗೆ ಅಂದು ಕರಾಳ ದಿನವೂ ಆಗಿತ್ತು. ಈ ಕರಾಳ ದಿನ ಮತ್ತೊಮ್ಮೆ ಬಂದಿದೆ. ಆದರೆ ನ್ಯಾಯಕ್ಕಾಗಿ ಆಗ್ರಹಿಸಿ ಹಮ್ಮಿಕೊಂಡಿರುವ ‘ಗಾಂಧಿಗಿರಿ ಹೋರಾಟ’ಕ್ಕೆ ಮಾತ್ರ ಕಂಪೆನಿ ಕ್ಯಾರೇ ಎನ್ನುತ್ತಿಲ್ಲ.
ನಗರದ ಆಡುಗೋಡಿಯಲ್ಲಿರುವ ಬಾಷ್ ಕಾರ್ಖಾನೆಯಲ್ಲಿ ಕಳೆದ ಆ.15ರಂದು ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿ ಮನೆಗೆ ಹೋದ ಕಾರ್ಮಿಕರು, ಮರುದಿನ ಎಂದಿನಂತೆ ಕಾರ್ಯನಿರ್ವಹಿಸಲು ಕಾರ್ಖಾನೆಗೆ ಬಂದಾಗ ಅಚ್ಚರಿ ಕಾದಿತ್ತು. ಕಾರ್ಖಾನೆಯ ಗೇಟ್‌ನಲ್ಲಿಯೇ ನಿಲ್ಲಿ ನಿಮಗೆ ಇಲ್ಲಿ ಕೆಲಸವಿಲ್ಲ. ನೀವು ಇನ್ನು ಮನೆಗೆ ಹೋಗಿ ಎಂಬ ಭಿತ್ತಿ ಪತ್ರಗಳನ್ನು ಕಂಡಾಗ ಕಾರ್ಮಿ ಕರೆಲ್ಲರೂ ಒಂದು ಕ್ಷಣ ಅಚ್ಚರಿಯಾಗಿ ದಿಕ್ಕು ತೋಚದಂತಾದರು.
ಆದರೆ ನ್ಯಾಯಕ್ಕಾಗಿ ಆಗ್ರಹಿಸಿ ಸ್ಥಳದಲ್ಲಿಯೇ ಧರಣಿ ಕೂತರು. ಅಂದಿನಿಂದ ಇಂದಿನವರೆಗೂ ಪಟ್ಟು ಬಿಡದೆ ಹಮ್ಮಿಕೊಂಡಿ ರುವ ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳು, ಕನ್ನಡ ಪರ ಹೋರಾಟ ಗಾರರು, ದಲಿತ ಚಳವಳಿಗಾರರು ಬೆಂಬಲ ಸೂಚಿಸಿದ್ದಾರೆ. ಆದರೆ ಇವರಿಗೆ ನ್ಯಾಯ ದೊರಕಿಸಲು ಸರಕಾರ ಮುಂದಾಗದೇ ಇರುವುದು ವಿಪರ್ಯಾಸವೇ ಸರಿ.
ಲಾಭದಲ್ಲಿ ಸಂಸ್ಥೆ: ಸಂಸ್ಥೆ ನಷ್ಟದಲ್ಲಿದೆ ಎಂದು ಸಬೂಬು ಹೇಳಿ ಹಂಗಾಮಿ ಕಾರ್ಮಿಕರನ್ನು ವಂಚಿಸಲಾಗುತ್ತಿದೆ. 2016 ಜನವರಿ ಯಲ್ಲಿ ಒಟ್ಟು 2,300 ಕೋಟಿ ರೂ. ನಿವ್ವಳ ಲಾಭದಲ್ಲಿದ್ದ ಬಾಷ್ ಸಂಸ್ಥೆ, ಜೂನ್ ವೇಳೆಗೆ 2,519 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂಬುದನ್ನು ಆರ್‌ಟಿಐ ಮೂಲಕ ಬಹಿರಂಗಗೊಂಡಿದೆ. ಆದರೆ ಹಂಗಾಮಿ ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಮೀನ ಮೇಷ ಎಣಿಸುತ್ತಿದೆ.
ಸಂಧಾನ ಸಭೆಗಳು ವಿಫಲ: ಹಂಗಾಮಿ ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಕಾರ್ಮಿಕರು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬಾಷ್ ಸಂಸ್ಥೆ ಜೊತೆ ನಡೆಸಿದ ಒಟ್ಟು 30ಕ್ಕೂ ಅಧಿಕ ಸಂಧಾನ ಸಭೆಗಳು ವಿಫಲವಾಗಿವೆ. ಕಾರ್ಮಿಕರು ಉದ್ಯೋಗ ಹಾಗೂ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಬಾಷ್ ಸಂಸ್ಥೆಯ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದ್ದಾರೆ.
ಈಡೇರದ ಆಶ್ವಾಸನೆಗಳು: ಸಂತ್ರಸ್ತ ಕಾರ್ಮಿಕರು ಹಮ್ಮಿಕೊಂಡಿ ರುವ ಹೋರಾಟದ ಸ್ಥಳಕ್ಕೆ ಸರಕಾರಿ ಪ್ರತಿನಿಧಿಗಳು ನಾಮಕಾವಸ್ಥೆಗೆ ಮಾತ್ರ ಭೇಟಿ ನೀಡಿ ದ್ದಾರೆ ವಿನಃ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಸಂತ್ರಸ್ಥ ಕಾರ್ಮಿಕರಿಗೆ ಕಾರ್ಮಿಕ ಸಚಿವರು, ಆಯುಕ್ತರು ಹಾಗೂ ಸರಕಾರದ ಪ್ರತಿನಿಧಿಗಳು ನ್ಯಾಯ ದೊರಕಿಸುವುದಾಗಿ ಹಲವಾರು ಬಾರಿ ಆಶ್ವಾಸನೆ ನೀಡಿದ್ದಾರೆ. ಆದರೆ ಈ ಆಶ್ವಾಸನೆಗಳು ಮಾತ್ರ ಆಶ್ವಾಸನೆಗಳಾಗಿ ಉಳಿದು ಕೊಂಡಿವೆ. ಬಾಷ್ ಕಂಪೆನಿಯಿಂದ ಅಕ್ರಮ: ಕಳೆದ ವರ್ಷ ನಗರದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 650 ಕೋಟಿ ರೂ.ಗಳನ್ನು ಹೂಟಿಕೆ ಮಾಡಿದ್ದ ಬಾಷ್ ಸಂಸ್ಥೆ ್ಲ ನಗರದ ಹೊರವಲಯ ಬಿಡದಿ ಬಳಿ 100ಎಕರೆಗೂ ಅಧಿಕ ಭೂಮಿಯನ್ನು ಖರೀದಿಸಿತ್ತು. ಈ ಭೂಮಿಯಲ್ಲಿ 4.27 ಎಕರೆ ಭೂಮಿಯನ್ನು ಅಕ್ರಮವಾಗಿ ಸ್ವ್ವಾಧೀನ ಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಶಾನುಮಂಗಲ ಗ್ರಾಮದ ಸರ್ವೇ ನಂ.178/2,3ರಲ್ಲಿ ಸುಮಾರು 45ಕ್ಕೂ ಅಧಿಕ ಮಂದಿ ನಿವೇಶನಗಳನ್ನು ಹಲವು ವರ್ಷಗಳ ಹಿಂದೆ ಖರೀದಿಸಿ ಅಂದಿನಿಂದ ಸರಕಾರಕ್ಕೆ ಕಂದಾಯವನ್ನು ಪಾವತಿಸುತ್ತಿದ್ದಾರೆ. ಆದರೆ ಈ ಭೂಮಿ ಸರಕಾರದ್ದು, ಎಂದು ಸುಳ್ಳು ದಾಖಲೆಗಳನ್ನು ತೋರಿಸಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡಿದೆ. ಕೆ ಐಎಡಿಬಿ ಅಧಿಕಾರಿಗಳು ಬಾಷ್ ಸಂಸ್ಥೆಯ ಜೊತೆ ಒಳ ಒಪ್ಪಂದ ಮಾಡಿಕೊಂಡು ಅಕ್ರಮವಾಗಿ ಮಾರಾಟ ಮಾಡಿದೆ ಎಂದು ಅನ್ಯಾಯಕ್ಕೆ ಒಳಗಾದ ನಿವೇಶನದ ಮಾಲಕರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಎರಡು ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಹೇಳಿ ಬಾಷ್ ಸಂಸ್ಥೆ ಸರಕಾರದಿಂದ ಬಿಡದಿ ಬಳಿ ಭೂಮಿ ಪಡೆದಿದೆ. ಆದರೆ ಹೊಸ ಕಾರ್ಮಿಕರನ್ನು ನೇಮಕ ಮಾಡದೆ ಆಡುಗೋಡಿ ಬ್ರಾಂಚ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರನ್ನೇ ನಿಯೋಜಿಸಲಾಗಿದೆ. -ನಾಗರಾಜ್, ಸಂತ್ರಸ್ತ ಕಾರ್ಮಿಕ
ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ನಮಗೆ ಕೇವಲ ಬಿಡಿಗಾಸು ಕೊಟ್ಟು ಕೈ ತೊಳೆದುಕೊಳ್ಳಲು ಬಾಷ್ ಸಂಸ್ಥೆ ಮುಂದಾಗಿದೆ. ಯಾವುದೇ ಕಾರಣಕ್ಕೂ ಪುನಃ ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವವರೆಗೂ ಧರಣಿಯನ್ನು ಕೈಬಿಡುವುದಿಲ್ಲ.
- ಧರ್ಮರಾಯ, ಸಂತ್ರಸ್ತ ಕಾರ್ಮಿಕ







