ಬ್ರಿಟನ್‌ನ ಮುಹಮ್ಮದ್ ಫರ್ಹಾಗೆ ಐತಿಹಾಸಿಕ ಚಿನ್ನ
ರಿಯೋ ಒಲಿಂಪಿಕ್ಸ್ 10,000 ಮೀ. ಓಟ

ರಿಯೋ ಡಿಜನೈರೊ, ಆ.14: ರಿಯೋ ಒಲಿಂಪಿಕ್ಸ್‌ನಲ್ಲಿ ಪುರುಷರ 10,000 ಓಟದಲ್ಲಿ ರೋಚಕ ಜಯ ಸಾಧಿಸಿದ ಮುಹಮ್ಮದ್ ಫರ್ಹಾ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಈ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಫರ್ಹಾ ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದ ಬ್ರಿಟನ್‌ನ ಮೊದಲ ಟ್ರಾಕ್ ಆ್ಯಂಡ್ ಫೀಲ್ಡ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಶನಿವಾರ ನಡೆದ ಓಟದ ಸ್ಪರ್ಧೆಯಲ್ಲಿ 33ರ ಪ್ರಾಯದ ಫರ್ಹಾ ಓಟದ ಮಧ್ಯೆದಲ್ಲಿ ವೇಗ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡು 10,000 ಮೀ. ದೂರವನ್ನು 27 ನಿಮಿಷ, 5.17 ಸೆಕೆಂಡ್‌ನಲ್ಲಿ ತಲುಪಿದರು. ಕೀನ್ಯದ ಪಾಲ್ ಟಾನು ಬೆಳ್ಳಿ(27:05.64) ಹಾಗೂ ಇಥಿಯೋಪಿಯದ ಟಮಿರಟ್ ಟೊಲಾ(27:06.26) ಕಂಚಿನ ಪದಕ ಪಡೆದರು.
ಫರ್ಹಾ ಬುಧವಾರ 5,000 ಮೀ. ಓಟದಲ್ಲಿ ಭಾಗವಹಿಸಲು ಟ್ರಾಕ್‌ಗೆ ವಾಪಸಾಗಿದ್ದಾರೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಫರ್ಹಾ 5000 ಮೀ. ಓಟದಲ್ಲಿ ಚಾಂಪಿಯನ್ ಆಗಿದ್ದರು.
‘‘ನನ್ನ ಮೂವರು ಮಕ್ಕಳಿಗಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದೇನೆ. ನನ್ನ ಕಿರಿಯ ಮಗನಿಗಾಗಿ 5,000 ಮೀ. ಓಟದಲ್ಲಿ ಚಿನ್ನದ ಪದಕ ಜಯಿಸಲು ಬಯಸಿದ್ದೇನೆ’’ಎಂದು ಫರ್ಹಾ ಹೇಳಿದ್ದಾರೆ.
ಫರ್ಹಾ 5000 ಮೀ. ಓಟದಲ್ಲೂ ಚಾಂಪಿಯನ್ ಎನಿಸಿಕೊಂಡರೆ 1976ರ ಬಳಿಕ ಒಲಿಂಪಿಕ್ಸ್‌ನಲ್ಲಿ ದೂರದ ಓಟದಲ್ಲಿ ಪ್ರಶಸ್ತಿ ಜಯಿಸಿದ ಮೊದಲಿಗ ಎನಿಸಿಕೊಳ್ಳಲಿದ್ದಾರೆ. 1976ರಲ್ಲಿ ಫಿನ್‌ಲ್ಯಾಂಡ್‌ನ ಲಾಸ್ಸೆ ವಿರೆನ್ ಈ ಸಾಧನೆ ಮಾಡಿದ್ದರು.







