ಮೀನುಗಾರಿಕಾ ಬೋಟುಗಳಿಗೆ ಸಕ್ರಮ ಪ್ರಮಾಣಪತ್ರ ವಿತರಣೆ

ಮ0ಗಳೂರು, ಆ.14: ಮೀನುಗಾರಿಕಾ ಇಲಾಖೆಯಲ್ಲಿ ನೋಂದಾಯಿಸದೆ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಯಾಂತ್ರೀಕೃತ ದೋಣಿಗಳನ್ನು ಸಕ್ರಮಗೊಳಿಸುವ ರಾಜ್ಯ ಸರಕಾರ ಅವಕಾಶ ಕಲ್ಪಿಸಿದ್ದು, ಮೀನುಗಾರರು, ದೋಣಿ ಮಾಲಕರು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಶಾಸಕ ಬಿ.ಎ.ಮೊಯ್ದಿನ್ ಬಾವಾ ಹೇಳಿದ್ದಾರೆ.
ಸಕ್ರಮಗೊಂಡ ಬೋಟ್ ಮಾಲಕರಿಗೆ ಸಕ್ರಮೀಕರಣ ಪ್ರಮಾಣಪತ್ರವನ್ನು ತನ್ನ ಕಚೇರಿಯಲ್ಲಿ ವಿತರಿಸಿ ಅವರು ಮಾತನಾಡುತ್ತಿದ್ದರು. ಯಾವುದೇ ರೀತಿಯಲ್ಲಿ ನೋಂದಣಿಗೊಳ್ಳದೇ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಬೋಟುಗಳಿಗೆ ಸರಕಾರದ ಡೀಸೆಲ್ ಸಬ್ಸಿಡಿ ಲಭ್ಯವಾಗುವುದಿಲ್ಲ. ಅಲ್ಲದೇ, ಬೋಟುಗಳು ಅವಘಡಕ್ಕೀಡಾದರೆ ಯಾವುದೇ ವಿಮಾ ಪರಿಹಾರವೂ ಸಿಗುವುದಿಲ್ಲ. ಈ ಬಗ್ಗೆ ವಿಧಾನಸಭಾ ಅಧಿವೇಶದಲ್ಲಿ ಈ ಹಿಂದೆ ತಾನು ಪ್ರಸ್ತಾಪಿಸಿದ್ದೆನು. ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರವು ಅಕ್ರಮ ಯಾಂತ್ರೀಕೃತ ದೋಣಿಗಳನ್ನು ಸಕ್ರಮಗೊಳಿಸಲು ಅವಕಾಶ ನೀಡಿದೆ. ಕರಾವಳಿಯ ಮೀನುಗಾರರು, ಇದನ್ನು ಉಪಯೋಗಿಸಿ ದೋಣಿಗಳ ಸಕ್ರಮೀಕರಣಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಮೀನುಗಾರರ ಕಲ್ಯಾಣಕ್ಕೆ ರಾಜ್ಯ ಸರಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮತ್ಸಾಶ್ರಯ ಯೋಜನೆಯಡಿ ಅರ್ಹ ಮೀನುಗಾರರಿಗೆ ಮನೆ ನಿರ್ಮಿಸಿಕೊಡುವ ಯೋಜನೆಯೂ ಉತ್ತಮ ರೀತಿಯಲ್ಲಿ ಜಾರಿಯಾಗುತ್ತಿದೆ. ಮತ್ಸಕ್ಷಾಮದಿಂದ ತೊಂದರೆಗೀಡಾದ ನಾಡದೋಣಿ ಮೀನುಗಾರರಿಗೆ ಸೂಕ್ತ ಪರಿಹಾರವನ್ನು ನೀಡಲಾಗಿದೆ ಎಂದು ಶಾಸಕ ಬಾವ ತಿಳಿಸಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಸುಶ್ಮಿತಾ ರಾವ್, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.





