ಬಿಲ್ಲವಾಸ್ ದುಬೈನಿಂದ ವಿದ್ಯಾರ್ಥಿ ವೇತನ ವಿತರಣೆ

ಮಂಗಳೂರು, ಆ.14: ಬಿಲ್ಲವಾಸ್ ದುಬೈ ಆ್ಯಂಡ್ ನಾರ್ಥನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ನ ಸಹಯೋಗದಲ್ಲಿ ಸ್ಕಾಲರ್‌ಶಿಪ್ ವಿತರಣೆ, ಶಿಕ್ಷಣ ಕ್ಷೇತ್ರದ ಸಾಧಕರಿಗೆ ಸಮ್ಮಾನ ಹಾಗೂ ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮ ಕುದ್ರೋಳಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಧಾನಪರಿಷತ್ ಸದ್ಸ ಕೋಟ ಶ್ರೀನಿವಾಸ್ ಪೂಜಾರಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಭವಿಷ್ಯದಲ್ಲಿ ತಾವು ಏನಾಗಬೇಕೆಂಬ ಯೋಜನೆಯನ್ನು ರೂಪಿಸಿ ಸಾಧಿಸುವ ದೃಷ್ಠಿಯಿಂದ ನಿರಂತರ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿಯುಸಿ, ಡಿಗ್ರಿ, ಸ್ನಾತಕೋತ್ತರ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಸೇರಿ ಒಟ್ಟು 212 ಮಂದಿಗೆ ಸ್ಕಾಲರ್‌ಶಿಪ್ ವಿತರಣೆ, 22 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 15 ಜನರಿಗೆ ವೈದ್ಯಕೀಯ ನೆರವು ಸೇರಿ ಒಟ್ಟು 15.68 ಲಕ್ಷ ರೂ. ವಿತರಿಸಲಾಯಿತು. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಮೇಘಶ್ರೀ ಜಕ್ರಿಬೆಟ್ಟು, ಚೈತ್ರ ಎ. ಸಾಲ್ಯಾನ್ ಅವರನ್ನು ಸಮ್ಮಾನಿಸಲಾಯಿತು. ಅಲ್ಲದೇ, ಬಿಲ್ಲವಾಸ್ ದುಬೈ ಆ್ಯಂಡ್ ನಾರ್ಥನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಪೂಜಾರಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿಲ್ಲವಾಸ್ ದುಬೈ ಆ್ಯಂಡ್ ನಾರ್ಥನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸತೀಶ್ ಪೂಜಾರಿ ಅವರು ಮಾತನಾಡಿ, ಬಿಲ್ಲವ ಸಮುದಾಯ ಒಂದಾಗಬೇಕು, ಒಟ್ಟಾಗಬೇಕು, ಈ ಮೂಲಕ ಸಮಾಜ ಹಾಗೂ ದೇಶಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಕಳೆದ 15 ವರ್ಷಗಳಿಂದ ಈ ಸಂಘ ಕಾರ್ಯನಿರ್ವಹಿಸುತ್ತಿದ್ದು, ಒಂದು ವರ್ಷದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ವಿದ್ಯೆಗೆ ಪ್ರಾಮುಖ್ಯತೆ ನೀಡಲು, ಸಮಾಜಕ್ಕೆ ಕೊಡುಗೆ ನೀಡಬೇಕೆಂದ ದೃಷ್ಠಿಯಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಬೆಂಗಳೂರು ಬಿಲ್ಲವ ಅಸೋಸಿಯೇಶನ್‌ನ ಅಧ್ಯಕ್ಷ ವೇದಕುಮಾರ್ , ಬಿಲ್ಲವ ದುಬೈ ಆ್ಯಂಡ್ ನಾರ್ಥನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಜಿತೇಂದ್ರ ಸುವರ್ಣ , ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಚಿತ್ರನಟ ರಾಜಶೇಖರ ಕೋಟ್ಯಾನ್, ಬಿಲ್ಲವಾಸ್ ದುಬೈ ಆ್ಯಂಡ್ ನಾರ್ಥನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ವಸಂತ ತುಂಬೆ, ಕೋಶಾಧಿಕಾರಿ ಆನಂದ ಬೈಲೂರು, ಜತೆ ಕೋಶಾಧಿಕಾರಿ ಪ್ರಭಾಕರ ಪೂಜಾರಿ, ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಗಣೇಶ ಬಂಗೇರ, ಟ್ರಸ್ಟ್‌ನ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಜಯಾನಂದ ಅವರು ಸ್ಕಾಲರ್‌ಶಿಪ್ ವಿತರಣೆಗಾಗಿ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ಮಹೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







