ಸೌದಿ: 2.52 ಲಕ್ಷ ಅಕ್ರಮ ವಲಸಿಗರ ಗಡಿಪಾರು

ಜಿದ್ದಾ,ಆ.14: ಸೌದಿ ಅರೇಬಿಯಾದ ವಾಸ ಹಾಗೂ ಉದ್ಯೋಗ ನಿಯಮಗಳನ್ನು ಉಲಂಘಿಸಿದ ಆರೋಪದಲ್ಲಿ 2,52,218 ಅಕ್ರಮ ವಲಸಿಗರನ್ನು ಕಳೆದ ಹತ್ತು ತಿಂಗಳಲ್ಲಿ ಗಡೀಪಾರು ಮಾಡಲಾಗಿದೆ. ಸರಾಸರಿ ದಿನಕ್ಕೆ 840 ಮಂದಿಯಂತೆ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗಿದೆ.
ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಭದ್ರತಾ ಅಧಿಕಾರಿಗಳು ಬಂದರುಗಳ ಮೂಲಕ ಅಕ್ರಮವಾಗಿ ನುಸುಳಲು ಯತ್ನಿಸಿದ 22,455 ಮಂದಿಯನ್ನು (ದಿನಕ್ಕೆ 75 ಮಂದಿಯಂತೆ) ಬಂಧಿಸಿದ್ದಾರೆ. ಇತರ 12,088 ಮಂದಿಯ ಗಡೀಪಾರು ಪ್ರಕ್ರಿಯೆ ಜಾರಿಯಲ್ಲಿದೆ. ಇಂಥವರಿಗಾಗಿ ಸರ್ಕಾರ ಆರಂಭಿಸಿರುವ ಪುನರ್ವಸತಿ ಕೇಂದ್ರಗಳಲ್ಲಿ ಇವರು ಆಶ್ರಯ ಪಡೆದಿದ್ದಾರೆ.
ಮಕ್ಕಾ ಹಾಗೂ ರಿಯಾದ್‌ನಿಂದ ಅತ್ಯಧಿಕ ಪ್ರಮಾಣದಲ್ಲಿ ಅಂದರೆ ಶೇಕಡ 55ರಷ್ಟು ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗಿದೆ. ಜನರಲ್ ಡೈರೆಕ್ಟರೇಟ್ ಆಫ್ ಬಾರ್ಡರ್ ಗಾರ್ಡ್ಸ್, ಈಗಾಗಲೇ ಸುರಕ್ಷತಾ ಹಾಗೂ ಗುಣಮಟ್ಟ ಕ್ರಮ ಹೆಚ್ಚಿಸುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ವರ್ಗಾವಣೆಗೆ ಸಜ್ಜಾಗಿದೆ. ಈ ಯೋಜನೆಯ ಮೊದಲ ಹಂತ ಈ ವರ್ಷದ ಕೊನೆಯ ತ್ರೈಮಾಸಿಕದ ವೇಳೆಗೆ ಜಾರಿಗೆ ಬರಲಿದೆ. ಶಿಪ್ ನೋಟಿಸ್, ಎಂಟ್ರಿ ಪರ್ಮಿಟ್‌ಗಳನ್ನು ಈ ವ್ಯವಸ್ಥೆಯಡಿ ನೀಡಲಾಗುತ್ತದೆ.





