ಬಿಸಿಎಫ್‌ನಿಂದ ವಿದ್ಯಾರ್ಥಿ ವೇತನ, ವಿವಿಧ ಸವಲತ್ತುಗಳ ವಿತರಣೆ
ಝಕರಿಯಾ ಜೋಕಟ್ಟೆಗೆ ‘ಸ್ಟಾರ್ ಆಫ್ ಬ್ಯಾರೀಸ್ 2016’ ಪ್ರಶಸ್ತಿ, ಇನಾಯತ್ ಅಲಿ ಮುಲ್ಕಿಗೆ ‘ಯುವ ಉದ್ಯಮಿ ಪ್ರಶಸ್ತಿ’ ಪ್ರದಾನ

ಮಂಗಳೂರು, ಆ.14: ದುಬೈನ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ವಿಕಲಚೇತನರಿಗೆ ಗಾಲಿ ಕುರ್ಚಿ ಮತ್ತು ಬಡ ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ಹೊಲಿಗೆ ಯಂತ್ರಗಳ ವಿತರಣೆ ಕಾರ್ಯಕ್ರಮ ಇಂದು ಅಪರಾಹ್ನ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ನಡೆಯಿತು.
ಶಾಸಕ ಬಿ.ಎ.ಮೊಯ್ದಿನ್ ಬಾವ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಎಫ್‌ನಂತಹ ಸಂಘಟನೆಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದರು.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಭಾಷಣ ಮಾಡಿದ ಫಿಝಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎಂ.ಫಾರೂಕ್, ಸಮುದಾಯದ ಅಭಿವೃದ್ಧಿ ಗೆ ಶಿಕ್ಷಣ ಅಗತ್ಯ. ಮುಸ್ಲಿಮ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅದೆ ರೀತಿ ಸಮುದಾಯದ ಗಂಡು ಮಕ್ಕಳು ಉನ್ನತ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಜುಬೈಲ್‌ನ ಅಲ್ ಮುಝೈನ್ ಕಂಪೆನಿಯ ಮುಖ್ಯಸ್ಥ ಝಕರಿಯಾ ಜೋಕಟ್ಟೆಯವರಿಗೆ ‘ಸ್ಟಾರ್ ಆಫ್ ಬ್ಯಾರೀಸ್ 2016’ ಪ್ರಶಸ್ತಿ ಹಾಗೂ ಓಶಿಯನ್ ಕನ್‌ಸ್ಟ್ರಕ್ಷನ್ ಇಂಡಿಯಾ ಪ್ರೈ ಲಿಮಿಟೆಡ್‌ನ ನಿರ್ದೇಶಕ ಇನಾಯತ್ ಅಲಿ ಮುಲ್ಕಿಯವರಿಗೆ ‘ಯುವ ಉದ್ಯಮಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಎಸೆಸೆಲ್ಸಿ ಹಾಗೂ ಪಿಯುಸಿ ತರಗತಿಯ ಮೂರು ವಿಭಾಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಒಂಬತ್ತು ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಓರ್ವ ಕ್ರೀಡಾಪಟುವಿಗೆ ‘ಬಿಸಿಎಫ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಮುಕ್ಕ ಸೀ ಫುಡ್‌ನ ಆಡಳಿತ ನಿರ್ದೇಶಕ ಮುಹಮ್ಮದ್ ಹಾರಿಸ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುರ್ರವೂಪ್ ಪುತ್ತಿಗೆ, ಮಂಗಳೂರು ವಿವಿ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ.ಎ.ಎಂ.ಖಾನ್ ಮತ್ತಿತರರು ಭಾಗವಹಿಸಿದ್ದರು. ಜುಬೈಲ್‌ನ ಅಲ್ ಮುಝೈನ್ ಕಂಪೆನಿಯ ಮುಖ್ಯಸ್ಥ ಝಕರಿಯಾ ಜೋಕಟ್ಟೆ, ಓಶಿಯನ್ ಕನ್‌ಸ್ಟ್ರಕ್ಷನ್ ಇಂಡಿಯಾ ಪ್ರೈ ಲಿಮಿಟೆಡ್‌ನ ನಿರ್ದೇಶಕ ಇನಾಯತ್ ಅಲಿ ಮುಲ್ಕಿ, ಬರ್ಶ ಇಂಟರ್‌ನ್ಯಾಷನಲ್ ಗ್ರೂಪ್‌ನ ಆಡಳಿತ ನಿರ್ದೇಶಕ ಫತಾವುಲ್ಲಾ ಸಾಹೇಬ್ ತೋನ್ಸೆ, ಧರಹ್ಮಾ ಗ್ರೂಪ್‌ನ ಎಂ.ಡಿ. ಶೇಖ್ ಶರೀಫ್, ಡಿಕೆಎಸ್‌ಸಿ ಕೆ.ಎಸ್.ಎ. ಅಧ್ಯಕ್ಷ ಅಬ್ದುಲ್ ಹಮೀದ್, ಬಿಲ್ಲವ ಅಸೋಸಿಯೇಶನ್ ದುಬೈ ಇದರ ಅಧ್ಯಕ್ಷ ಸತೀಶ್ ಪೂಜಾರಿ, ಮುಡಾ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಗುಲಾಂ ಜೀಲಾನಿ ಖಾದ್ರಿ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಮ್ ಎಜ್ಯುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್‌ನ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು ರಹ್ಮತ್ ಅಲಿ, ವಿಟ್ಲ ಖಾದರ್, ಎಂ.ಕೆ.ಅಬ್ದುಲ್ ಖಾದರ್, ಮೂಸಬ್ಬ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬ್ಯಾರಿ ಕಲ್ಚರಲ್ ಫೋರಂನಿಂದ ಇಂದು ಒಟ್ಟು ರೂ. 28 ಲಕ್ಷದ ವಿದ್ಯಾರ್ಥಿವೇತನ, ಗಾಲಿಖುರ್ಚಿ ಮತ್ತು ಹೊಲಿಗೆಯಂತ್ರವನ್ನು ವಿತರಿಸಲಾಯಿತು.
650 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, 20 ಮಂದಿ ವಿಕಲಚೇತನರಿಗೆ ಗಾಲಿಖುರ್ಚಿ ಮತ್ತು 15 ಮಂದಿಗೆ ಸ್ವ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.







