ಸುಳ್ಯ: ಮೊಗೇರ ಯುವ ವೇದಿಕೆಯಿಂದ ದುಡಿ ಮಿನದನ
ಲಯನ್ಸ್ ಕ್ಲಬ್ ಸಹಯೋಗದಲ್ಲಿ ನೇತ್ರದಾನ

ಸುಳ್ಯ,ಆ.14: ಸುಳ್ಯ ತಾಲೂಕು ಮೊಗೇರ ಯುವ ವೇದಿಕೆಯ ಆಶ್ರಯದಲ್ಲಿ ದುಡಿ ಮಿನದನ ಎಂಬ ವಿನೂತನ ಕಾರ್ಯಕ್ರಮ ಕೆ.ವಿ.ಜಿ ಪುರಭವನದಲ್ಲಿ ನಡೆಯಿತು.
ತಾಲೂಕು ಮೊಗೇರ ಸಂಘ ಹಾಗೂ ತಾಲೂಕು ಮಹಿಳಾ ಘಟಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇದರ ಸಹಕಾರದಲ್ಲಿ ನಡೆದ ದುಡಿ ಮಿನದನದಲ್ಲಿ ಆಟಿಡೊಂಜಿ ದಿನ, ಮೊಗೇರ ಕೂಡುಕಟ್ಟು, ಸಾಧಕರಿಗೆ ಸನ್ಮಾನ ಹಾಗೂ 25 ಯುವಕರಿಂದ ನೇತ್ರದಾನ ಘೋಷಣೆ ಕಾರ್ಯಕ್ರಮ ನಡೆಯಿತು.
ಮೊಗೇರ ಜನಾಂಗದ ಸಂಪ್ರದಾಯದಂತೆ ಮಂಜ ಮಾಡಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕುಲದ ಬಗೆಗೆ ನಮಗೆ ತಾತ್ಸಾರ ಮನೋಭಾವ ಬೇಡ. ಜೀವನವನ್ನು ಸವಾಲಾಗಿ ಸ್ವೀಕರಿಸಿ ಸಮಾಜದ ಪರಿವರ್ತನೆಗೆ ಕಾರಣರಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾರಗೋಡಿನ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅವರು, ಮೊಗೇರರು ಪ್ರಕೃತಿ ಆರಾಧಕರು. ನೆಲದೊಂದಿಗೆ ಅನುಸಂಧಾನ ಹೊಂದಿದವರು. ಈ ಮಹತ್ವ, ಪ್ರಾತಿನಿಧ್ಯದ ಕುರಿತು ಯುವಜನತೆಗೆ ತಿಳಿಸಿಕೊಡುವ ಕಾರ್ಯ ಆಗಬೇಕು ಎಂದರು.
ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಮೊಗೇರ ಜನಾಂಗದ ಕೊಡುಗೆ ಮಹತ್ವಪೂರ್ಣವಾದುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕೆ.ಟಿ.ವಿಶ್ವನಾಥ ಹೇಳಿದರು. ರಾಜೀವ ಗಾಂಧಿ ಆರೋಗ್ಯ ವಿ.ವಿ ಸಿಂಡಿಕೇಟ್ ಸದಸ್ಯ ಡಾ.ರಘು, ಲಯನ್ಸ್ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಶಂಕರ್ ಪೆರಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.
ದುಡಿಕುಣಿತ, ದುಡಿಬಾರಿಸುವಿಕೆ, ಪಾಡ್ದನ, ಸಂಧಿ ಹೇಳುವುದರಲ್ಲಿ ಅಪಾರ ಜ್ಞಾನ ಹೊಂದಿರುವ ಸಮಾಜದ ಸಾಧಕರಾದ ಕುಂಞ ಐತ್ತ ಪೆರಾಜೆ, ಮುದರ ಕಾವು, ನಾರಾಯಣ ನೀರಬಿದಿರೆ, ಕೊರಪ್ಪೊಳು ಜಯನಗರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ, ಭರತ ನಾಟ್ಯ, ಸಿನೆಮಾ ಕ್ಷೇತ್ರದ ಪ್ರತಿಭಾ ವಂತರಿಗೆ ಗೌರವ ಪುರಸ್ಕಾರ ನಡೆಯಿತು. ಇದೇ ಸಂದರ್ಭದಲ್ಲಿ ನೇತ್ರದಾನ ಮಾಡುತ್ತಿರುವ ಸುಮಾರು 25 ಮಂದಿಗೆ ಲಯನ್ಸ್ ಕ್ಲಬ್ ವತಿಯಿಂದ ಪ್ರಮಾಣಪತ್ರ ನೀಡುವ ಕಾರ್ಯಕ್ರಮ ನಡೆಯಿತು. ಮೊಗೇರ ಸಮಾಜದ ದಿ.ಸಣ್ಣಕ್ಕ ಬಂಗ್ಲೆಗುಡ್ಡೆ ಮತ್ತು ಕೊರಪ್ಪೊಳು ಜಯನಗರ ಅವರನ್ನು ರಾಜ್ಯವ್ಯಾಪಿಯಾಗಿ ಗುರುತಿಸಲು ಕಾರಣರಾದ ಜಾನಪದ ಸಂಸೋಧಕ ಡಾ.ಸುಂದರ್ ಕೇನಾಜೆಯವರನ್ನು ಸನ್ಮಾನಿಸಲಾಯಿತು. ಮೊಗೇರ ಯುವ ವೇದಿಕೆಯ ಅಧ್ಯಕ್ಷ ಲೋಕೇಶ್ ಪಲ್ಲತ್ತಡ್ಕ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಂಗ್ಲೆಗುಡ್ಡೆ , ಕೋಶಾಧಿಕಾರಿ ಪ್ರಶಾಂತ್ ಬಂಗ್ಲೆಗುಡ್ಡೆ, ಗೌರವ ಸಲಹೆಗಾರರಾದ ನಂದರಾಜ್ ಸಂಕೇಶ, ಕೇಶವ ಮಾಸ್ತರ್ ಹೊಸಗದ್ದೆ, ದೇವಪ್ಪ ಹೈದಂಗೂರು ಉಪಸ್ಥಿತರಿದ್ದು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.







