ಸುಳ್ಯ: ಗೌಡ ಯುವ ಸೇವಾ ಸಮಿತಿ ನಗರ ಘಟಕದಿಂದ ಆಟಿ ಆಚರಣೆ

ಸುಳ್ಯ,ಆ.14: ಗೌಡ ಯುವ ಸೇವಾ ಸಂಘದ ಸುಳ್ಯ ನಗರ ಸಮಿತಿ, ಮಹಿಳಾ ಹಾಗೂ ತರುಣ ಘಟಕಗಳ ವತಿಯಿಂದ ಆಟಿ ಆಚರಣೆ ಕಾರ್ಯಕ್ರಮ ಕೊಡಿಯಾಲ್ ಬೈಲಿನ ಗೌಡ ಸಮುದಾಯ ಭವನದಲ್ಲಿ ನಡೆಯಿತು.
ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭಾನುಮತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೆಣ್ಣು ಸಮಾಜದ ಕಣ್ಣು. ಆಕೆ ಜವಾಬ್ದಾರಿಯುತವಾಗಿ ತನ್ನ ಕರ್ತವ್ಯ ನಿರ್ವಹಿಸಿದರೆ ಸಂಸಾರವೂ ಸಮಾಜವೂ ಬೆಳಗುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಶಿಕ್ಷಕಿ ಕೆ.ಚಂದ್ರಮತಿ ಅವರು, ಸ್ತ್ರೀಯರ ಮನಸ್ಸಿಗೆ ನೋವಾಗುವಂತಹ ಅನೇಕ ಸಂಪ್ರದಾಯಗಳು ನಮ್ಮ ಸಮಾಜದಲ್ಲಿದೆ. ಹೆಣ್ಣು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕೆಂಬ ಸಂದೇಶವನ್ನು ನಾವು ನೀಡಿದ್ದೇವೆ. ಊರ ಗೌಡರುಗಳು ಇಂತಹ ಕೆಲವು ಗೊಡ್ಡು ಸಂಪ್ರದಾಯವನ್ನು ತಿರಸ್ಕರಿಸುವ ಕಾರ್ಯ ಮಾಡಬೇಕು ಎಂದರು. ಯಾವ ಸಮಾಜದ ಪುರುಷರು ಮಹಿಳೆಯರನ್ನು ಗೌರವವಾಗಿ ಕಾಣುತ್ತಾರೆಯೋ ಆ ಸಮಾಜದ ಮಹಿಳೆಯರು ಕೂಡಾ ಪುರುಷರನ್ನು ಗೌರವದಿಂದ ಕಾಣುತ್ತಾರೆ ಎಂದವರು ಹೇಳಿದರು.
ಸುಳ್ಯ ತಾಲೂಕು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಆಟಿ ಎಂದರೆ ಹಿಂದೆ ಕಷ್ಟದ ದಿನಗಳು. ಇಂತಹ ವೈಶಿಷ್ಟ್ಯತೆ ಮತ್ತು ಆಚರಣೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯ ನಡೆಯಬೇಕು ಎಂದವರು ಹೇಳಿದರು.
ಉದ್ಯಮಿ ಭಾಸ್ಕರ ಐಡಿಯಲ್ ಅತಿಥಿಯಾಗಿ ಭಾಗವಹಿಸಿದ್ದರು. ಗೌಡ ಯುವ ಸೇವಾ ಸಂಘದ ಸುಳ್ಯ ನಗರ ಸಮಿತಿ ಅಧ್ಯಕ್ಷ ಸಂತೋಷ್ ಮಡ್ತಿಲ, ಸಮಿತಿ ಕಾರ್ಯದರ್ಶಿ ರಾಕೇಶ್ ಕುಂಠಿಕಾನ, ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶಿವಪ್ಪ, ಕಾರ್ಯದರ್ಶಿ ಲತಾ ಕುದ್ಪಾಜೆ, ನಗರ ತರುಣ ಘಟಕದ ಅಧ್ಯಕ್ಷ ಅವಿನಾಶ್ ಕುರುಂಜಿ, ಡಿ.ಟಿ.ದಯಾನಂದ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ 60 ವರ್ಷದವರಿಗೆ ಆಕರ್ಷಕ ಸ್ಪರ್ಧೆಗಳು ನಡೆಯಿತು. ಆಟಿಯ ವಿಶೇಷ ಖಾದ್ಯಗಳ ಔತಣವೂ ನಡೆಯಿತು.







