ಚೌತಾಲಾ ರಿಯೊ ಒಲಿಂಪಿಕ್ಸ್‌ಗೆ ಹೋಗಿದ್ದು ಹೇಗೆ?
ಅಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯ

ಹೊಸದಿಲ್ಲಿ,ಆ.14: ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸುತ್ತಿರುವ,ಐಎನ್‌ಎಲ್‌ಡಿ ಮುಖ್ಯಸ್ಥ ಓಂಪ್ರಕಾಶ ಚೌತಾಲಾರ ಪುತ್ರ ಅಭಯ ಚೌತಾಲಾ ತನ್ನ ಅನುಮತಿ ಪಡೆದುಕೊಳ್ಳದೆ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತೆರಳಿದ್ದು ಹೇಗೆ ಎಂದು ಇಲ್ಲಿಯ ವಿಶೇಷ ನ್ಯಾಯಾಲಯವು ಅಚ್ಚರಿ ವ್ಯಕ್ತಪಡಿಸಿದೆ.
ಇತ್ತೀಚಿನ ವಿಚಾರಣೆ ಸಂದರ್ಭ ಈ ವಿಷಯ ಪ್ರಸ್ತಾಪಗೊಂಡಿತು. ಕ್ರೀಡಾ ಆಡಳಿತಗಾರ ಮತ್ತು ಭಾರತೀಯ ಒಲಿಂಪಿಕ್ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಅಭಯ ಚೌತಾಲಾ ಆ.2ರಿಂದ 25ರವರೆಗೆ ರಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತೆರಳಿರುವುದರಿಂದ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿಯನ್ನು ಕೋರಿ ಅವರ ಪರ ವಕೀಲರು ವಿಶೇಷ ಸಿಬಿಐ ನ್ಯಾಯಾಧೀಶ ಸಂಜಯ ಗರ್ಗ್ ಅವರಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಚೌತಾಲಾರ ಜಾಮೀನು ಆದೇಶದಲ್ಲಿ ವಿದೇಶ ಪ್ರಯಾಣಕ್ಕೆ ಮುನ್ನ ನ್ಯಾಯಾಲಯದಿಂದ ಅನುಮತಿ ಪಡೆದುಕೊಳ್ಳಬೇಕೆಂಬ ಯಾವುದೇ ನಿರ್ದಿಷ್ಟ ಷರತ್ತು ಇಲ್ಲ ಎಂದು ಅವರು ಈ ಸಂದರ್ಭ ತಿಳಿಸಿದ್ದರು.
ಆದರೆ ನ್ಯಾಯಾಲಯವು, ವಿದೇಶಕ್ಕೆ ತೆರಳಲು ಆರೋಪಿಯು ನಿರ್ದಿಷ್ಟ ಅನುಮತಿಯನ್ನು ಕೋರಿಲ್ಲ.ಜಾಮೀನಿನಲ್ಲಿ ಈ ಬಗ್ಗೆ ಯಾವುದೇ ಷರತ್ತು ಇಲ್ಲದಿರುವುದರಿಂದ ಈ ನ್ಯಾಯಾಲಯದಿಂದ ಅನುಮತಿಯನ್ನು ಕೋರಲಿಲ್ಲ ಎಂದು ಆರೋಪಿ ಪರ ವಕೀಲರು ಹೇಳುತ್ತಿದ್ದಾರೆ ಎಂದು ಅಚ್ಚರಿ ವ್ಯಕ್ತಪಡಿಸಿತು.





