ದುಬೈ: ಆ.19ರಂದು ಸ್ವಾತಂತ್ರೋತ್ಸವ ಪ್ರಯುಕ್ತ ಕೆಸಿಎಫ್‌ನಿಂದ ಸ್ನೇಹ ಸಂಗಮ

ದುಬೈ, ಆ.14: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ಸಮಿತಿಯ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಪ್ರಯುಕ್ತ ಸ್ನೇಹ ಸಂಗಮ ಕಾರ್ಯಕ್ರಮವು ಆ.19ರಂದು ಸಂಜೆ 7:30ಕ್ಕೆ ಬರ್ ದುಬೈ ಅಲ್ ಫಹಿದಿ ಮೆಟ್ರೋ ಸ್ಟೇಷನ್‌ಸಮೀಪದ ಮುಸಲ್ಲ ಟವರ್‌ನಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮಹಬೂಬ್ ಸಖಾಫಿ ಕಿನ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಸಿಎಫ್ ದುಬೈ ಸಮಿತಿಯ ಅಧ್ಯಕ್ಷ ಮಹಬೂಬ್ ಸಖಾಫಿ ಕಿನ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಜಿ ಶೈಕ್ ಬಾವ ಮಂಗಳೂರು ಉದ್ಘಾಟಿಸುವರು. ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ, ಪ್ರಧಾನ ಕಾರ್ಯದರ್ಶಿಉಸ್ಮಾನ್ ಹಾಜಿ ನಾಪೋಕ್ಲು, ಕರ್ನಾಟಕ ಸಂಘ ಅಬುಧಾಬಿ ಇದರ ಅಧ್ಯಕ್ಷ ಸರ್ವತ್ತೊಮ ಶೆಟ್ಟಿ ಮತ್ತು ಉದ್ಯಮಿಗಳಾದ ಫ್ರಾಂಕ್ ಫೆರ್ನಾಂಡಿಸ್ ಸ್ವಾತಂತ್ರೋತ್ಸವ ಸಂದೇಶ ಭಾಷಣ ಮಾಡುವರು.
ಇದೇ ಸಂದರ್ಭ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿ 37 ಹಡಗುಗಳನ್ನು ನಿರ್ಮಿಸಿ ಸಾಧನೆಗೈದ ಅನಿವಾಸಿ ಕನ್ನಡಿಗ ಮಂಗಳೂರು ಕೋಟೆಕಾರು ನಿವಾಸಿ ಅಬ್ದುರ್ರವೂಫ್‌ರನ್ನು ಗೌರವಿಸಲಾಗುವುದು. ಸ್ವಾಂತಂತ್ರೋತ್ಸವದ ಹಿನ್ನೆಲೆಯಲ್ಲಿ ಕೆಸಿಎಫ್ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ಕೆಸಿಎಫ್ ಹಾಗೂ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಬ್ದುಲ್ ಜಲೀಲ್ ನಿಝಾಮಿ, ಇಬ್ರಾಹೀಂ ಸಖಾಫಿ ಕೆದುಂಬಾಡಿ, ಹುಸೈನ್ ಹಾಜಿ ಕಿನ್ಯ, ಪಿ.ಎಂ.ಎಚ್.ಅಬ್ದುಲ್ ಹಮೀದ್ ಈಶ್ವರಮಂಗಲ, ಎಂ.ಇಬ್ರಾಹೀಂ ಮೂಳೂರು, ಅಬ್ದುಲ್ಲತೀಫ್ ಮುಲ್ಕಿ ಶಾರ್ಜಾ, ಅಶ್ರಫ್ ಹಾಜಿ ಅಡ್ಯಾರ್, ಅಬ್ದುರ್ರಝಾಕ್ ಹಾಜಿ ಶಾರ್ಜಾ, ಕೆ.ಎಚ್.ಮುಹಮ್ಮದ್ ಸಖಾಫಿ ಅಬುಧಾಬಿ, ಅಬ್ದುಲ್ ಖಾದರ್ ಸಅದಿ ಅಜ್ಮಾನ್, ಅಬ್ದುರ್ರಝಾಕ್ ಹಾಜಿ ನಾಟೆಕಲ್ ಅಲ್-ಐನ್ ಸೇರಿದಂತೆ ಹಲವು ಉಲಮಾ ಉಮರಾ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಕಲಂದರ್ ಕಬಕ, ಪ್ರಕಾಶನ ವಿಭಾಗದ ಕಾರ್ಯದರ್ಶಿ ರಫೀಕ್ ಸಂಪ್ಯ, ಆಡಳಿತ ವಿಭಾಗದ ಅಧ್ಯಕ್ಷ ರಫೀಕ್ ಕಲ್ಲಡ್ಕ ಉಪಸ್ಥಿತರಿದ್ದರು.







