ದುರ್ಬಲ ವರ್ಗಗಳ ಮೇಲೆ ದಾಳಿ: ರಾಷ್ಟ್ರಪತಿ ಕಳವಳ
ಹೊಸದಿಲ್ಲಿ,ಆ.14: ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು, ದುರ್ಬಲ ವರ್ಗಗಳ ಮೇಲಿನ ದಾಳಿಗಳನ್ನು ದೃಢವಾಗಿ ಹತ್ತಿಕ್ಕುವ ಅಗತ್ಯವಿದೆ ಎಂದು ರವಿವಾರ ಇಲ್ಲಿ ಹೇಳಿದರು. ನಮ್ಮ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವಲ್ಲಿ ನಾವು ವಿಫಲರಾದರೆ ನಮ್ಮನ್ನು ನಾವು ನಾಗರಿಕ ಸಮಾಜ ಎಂದು ಕರೆದುಕೊಳ್ಳಲು ಸಾಧ್ಯವಿಲ್ಲ ಎಂದೂ ಅವರು ಕಳಕಳಿ ವ್ಯಕ್ತಪಡಿಸಿದರು.
ದೇಶದ 70ನೇ ಸ್ವಾತಂತ್ರದಿನದ ಮುನ್ನಾದಿನ,ತನ್ನ ಅಧಿಕಾರಾವಧಿಯಲ್ಲಿ ಐದನೆಯ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಷ್ಟ್ರಪತಿಗಳು,ವಿಭಜಕ ರಾಜಕೀಯ ಕಾರ್ಯಸೂಚಿಯ ವಿವೇಚನಾರಹಿತ ಅನುಸರಣೆ ಮತ್ತು ಗುಂಪುಗಳು ಹಾಗೂ ವ್ಯಕ್ತಿಗಳಿಂದ ಚರ್ಚೆಗಳ ಧ್ರುವೀಕರಣದ ವಿರುದ್ಧ ಎಚ್ಚರಿಕೆ ನೀಡಿದರು. ಇವು ಸಾಂಸ್ಥಿಕ ಅವಹೇಳನ ಮತ್ತು ಸಾಂವಿಧಾನಿಕ ವಿಧ್ವಂಸಕತೆಗೆ ಕಾರಣವಾಗುತ್ತವೆ ಎಂದು ಹೇಳಿದರು.
ಪ್ರಜಾಪ್ರಭುತ್ವವೆಂದರೆ ಕಾಲಕಾಲಕ್ಕೆ ಸರಕಾರವನ್ನು ಚುನಾಯಿಸುವ ಹಕ್ಕಿನ ಚಲಾವಣೆ ಮಾತ್ರವಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಷ್ಟ್ರಪತಿ ಭಾಷಣದ ಮುಖ್ಯಾಂಶಗಳು:
*ನಮ್ಮ ರಾಷ್ಟ್ರೀಯ ಸದಾಚಾರಕ್ಕೆ ವ್ಯತಿರಿಕ್ತವಾಗಿರುವ ದುರ್ಬಲ ವರ್ಗಗಳ ಮೇಲಿನ ದಾಳಿಗಳಿಗೆ ಸಂಬಂಧಿಸಿದಂತೆ ಕಠಿಣವಾಗಿ ವ್ಯವಹರಿಸುವ ಅಗತ್ಯವಿದೆ.
►ಧರ್ಮದ ಆಧಾರದ ಮೂಲಭೂತವಾದದಲ್ಲಿ ತಮ್ಮ ಬೇರುಗಳನ್ನು ಹೊಂದಿರುವ ಸರಣಿ ಭಯೋತ್ಪಾದಕ ಚಟುವಟಿಕೆಗಳಿಗೆ ವಿಶ್ವವು ಸಾಕ್ಷಿಯಾಗಿದೆ.
►ಭಯೋತ್ಪಾದನೆಯ ವಿರುದ್ಧ ವಿಶ್ವವು ಬೇಷರತ್ ಆಗಿ ಒಗ್ಗಟ್ಟಿನಿಂದ ಹೋರಾಡಬೇಕಿದೆ.
►ಸತತ ಎರಡು ವರ್ಷಗಳ ಬರಗಾಲವನ್ನು ಕಂಡರೂ ಹಣದುಬ್ಬರವು ಶೇ.6ಕ್ಕಿಂತ ಕೆಳಗೇ ಇರುವುದು ನಮ್ಮ ರಾಷ್ಟ್ರವು ಎಂತಹ ಸಂದರ್ಭಗಳಲ್ಲೂ ಪುಟಿದು ನಿಲ್ಲುತ್ತದೆ ಎನ್ನುವುದಕ್ಕೆ ನಿದರ್ಶನವಾಗಿದೆ.
►ಸಮಾಜ ಮತ್ತು ಭಾರತದ ಪ್ರಭುತ್ವದ ಸಾಮೂಹಿಕ ವಿವೇಚನೆಯು ವಿಚ್ಛಿದ್ರಕಾರಿ ಶಕ್ತಿಗಳನ್ನು ನಗಣ್ಯಗೊಳಿಸುತ್ತದೆ ಮತ್ತು ಭಾರತದ ಗಮನಾರ್ಹ ಪ್ರಗತಿಗಾಥೆಯು ಯವುದೇ ಅಡೆತಡೆಗಳಿಲ್ಲದೆ ಮುಂದುವರಿಯುತ್ತದೆ ಎನ್ನುವ ವಿಶ್ವಾಸವು ಮೂಡಿದೆ.
►ಎಲ್ಲ ಕಡೆಯೂ ಸಮಾನವಾದ ಪ್ರಗತಿಯಾದರೆ ಮಾತ್ರ ಭಾರತವು ನಿಜವಾದ ಪ್ರಗತಿಯನ್ನು ಹೊಂದುತ್ತದೆ.
►ಸರಕಾರದ ಪ್ರತಿಯೊಂದು ಅಂಗದ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ನಮ್ಮ ಸಂವಿಧಾನವು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ. ಸರಕಾರದ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ಸಂಬಂಧಿಸಿದಂತೆ ಭಾರತದ ವಿಶಿಷ್ಟ ಲಕ್ಷಣವಾದ ಸದಾಚಾರವನ್ನು ಅದು ಎತ್ತಿ ಹಿಡಿದಿದೆ. ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಈ ಮರ್ಯಾದೆಯನ್ನು ಪಾಲಿಸಿ ಸಂವಿಧಾನದ ಸ್ಫೂರ್ತಿಯನ್ನು ಎತ್ತಿ ಹಿಡಿಯಬೇಕು.
►ಜಿಎಸ್‌ಟಿಗಾಗಿ ಸಂವಿಧಾನ ತಿದ್ದುಪಡಿ ಮಸೂದೆಯ ಅಂಗೀಕಾರವು ಭಾರತದ ಪ್ರಜಾಸತ್ತಾತ್ಮಕ ಪರಿಪಕ್ವತೆಯ ಸಂಭ್ರಮಾಚರಣೆಗೆ ಉತ್ತಮ ಕಾರಣವಾಗಿದೆ.