ಜನಪರ ಯೋಜನೆಗಳ ಸಮರ್ಪಕ ಜಾರಿಗೆ ಡಿಸಿಗೆ ಮನವಿ

ಕಾರವಾರ, ಆ.14: ರಾಜ್ಯ ಸರಕಾರ ಜಾರಿಗೆ ತಂದಿರುವ ಕೆಲವು ಅಸಮರ್ಪಕ ಯೋಜನೆಗಳಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಅವುಗಳನ್ನು ಸ್ಥಗಿತಗೊಳಿಸಿ ಜನಪರ ನಿಯಮಾವಳಿಗಳ ಮೂಲಕ ಕಾರ್ಯಗತಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಕಾರ್ಯರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಕಾರ ಅದೆಷ್ಟೇ ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಕೂಡ ಅದು ಜನರನ್ನು ತಲುಪುವಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಕೆಲವು ಯೋಜನೆಗಳು ತೀರಾ ಅಸಮರ್ಪಕವಾಗಿರುವುದರಿಂದ ಜನರು ಅವುಗಳನ್ನು ಪಡೆಯಲು ಹರ ಸಾಹಸಪಡಬೇಕಾದ ಅನಿವಾರ್ಯತೆ ಎದುರಾಗಿದೆ. ಈಗಾಗಲೇ ಪಡಿತರ ಕೂಪನ್, ಆಧಾರ್ ಸಂಖ್ಯೆ ಜೋಡಣೆ, ಚುನಾವಣೆ ಗುರುತಿನ ಚೀಟಿ ಜೋಡಣೆ, ಬಯೋಮೆಟ್ರಿಕ್ ಫೋಟೊಗಳಿಗಾಗಿ ಜನರು ಸೈಬರ್ ಕೇಂದ್ರಗಳಿಗೆ ಅಲೆದು ಬೇಸತ್ತಿದ್ದಾರೆ. ಇದರಿಂದ ಬಡ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಅಲ್ಲದೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕಂದಾಯ ಭೂಮಿ ಸರ್ವೇ ಕಾರ್ಯ ವಿಳಂಬವಾಗುತ್ತಿದ್ದು, ಕೂಡಲೇ ಇದನ್ನು ಮುಗಿಸಿ ಸೂರು ಯೋಜನೆಯಡಿ ವಸತಿ ರಹಿತ ಬಡವರಿಗೆ ವಸತಿ ಕಲ್ಪಿಸಬೇಕು. ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಅತಿಕ್ರಮ ಮಾಡಿಕೊಂಡು ವಾಸವಾಗಿರುವವರ ಭೂಮಿಯನ್ನು ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಗ್ರಹಮಂಡಳಿಯು ಸ್ಥಳೀಯ ಬ್ಯಾಂಕ್‌ಗಳ ಮೂಲಕ ಕಾರವಾರದ ಹಣಕೋಣದಲ್ಲಿ ಭೂಮಿ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆದುಕೊಂಡಿದ್ದು, ಈವರೆಗೂ ವಸತಿಗಳನ್ನು ಮಂಜೂರು ಮಾಡಿಲ್ಲ. ಮುಂಡಗೋಡ ತಾಲೂಕಿನಲ್ಲಿ ಈ ಮಳೆಗಾಲದಲ್ಲೇ ಕುಡಿಯುವ ನೀರಿನ ಅಭಾವ ಇದ್ದು, ಅದನ್ನು ನೀಗಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದಭರ್ದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಜಿ. ಎಲಕಪಾಟಿ, ಚಿದಾನಂದ ಹರಿಜನ್, ಫಕೀರಪ್ಪ ಭಂಡಾರಿ, ಲಕ್ಷ್ಮಣ ಬಣಸೊಡಿ, ಎಚ್ ಪಿಶಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







