ಶಿಕ್ಷಣದಿಂದ ಹಾಲಕ್ಕಿ ಸಮುದಾಯದ ಪ್ರಗತಿ ಸಾಧ್ಯ: ಸಚಿವ ದೇಶಪಾಂಡೆ
ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಭಾಭವನ ಲೋಕಾರ್ಪಣೆ

ಅಂಕೋಲಾ, ಆ.14: ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ. ಸಮುದಾಯ ಬಾಂಧವರು ಶಿಕ್ಷಿತರಾದರೆ ಮಾತ್ರ ಹಾಲಕ್ಕಿ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅಭಿಪ್ರಾಯಿಸಿದ್ದಾರೆ.
ಅವರು ತಾಲೂಕಿನ ಶಿರಕುಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಹಾಲಕ್ಕಿ ಸಮಾಜದ ಸಭಾಭವನವನ್ನು ರವಿವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಾಲಕ್ಕಿ ಸಮುದಾಯದವರು ತೀರಾ ಮುಗ್ಧ್ದರು. ಅವರು ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಗುರುತಿಸಿಕೊಳ್ಳ್ಳುವಂತಾಗಬೇಕು. ಹಾಲಕ್ಕಿ ಸಮಾಜದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಅವರು ತಮ್ಮ ಸಮಾಜದ ಏಳಿಗೆಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದರು. ಶಾಸಕ ಸತೀಶ್ ಸೈಲ್ ಮಾತನಾಡಿ, ಈ ಹಿಂದೆ ಹಾಲಕ್ಕಿ ಸಮಾಜದ ವಿವಿಧ ಕಾರ್ಯ ಚಟುವಟಿಕೆಗಳು ಅನ್ಯ ಕಟ್ಟಡದಲ್ಲಿ ನಡೆಯುತ್ತಿದ್ದವು. ಆದರೆ, ಈಗ ತಮ್ಮದೇ ಸಭಾಭವನವನ್ನು ಹೊಂದುವ ಮೂಲಕ ಸಮಾಜದವರಿಗೆ ಅನುಕೂಲವಾಗಲಿದೆ. ಪ್ರತಿಭಾ ಪುರಸ್ಕಾರ ಹಾಗೂ ಇನ್ನಿತರ ಕಾರ್ಯಚಟುವಟಿಕೆಗಳಿಗೆ ಸಮಾಜದೊಂದಿಗೆ ಇರುವುದಾಗಿ ಭರವಸೆ ನೀಡಿದರು.
ಉ.ಕ. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಮಾಜಿ ಶಾಸಕ ಕೆ.ಎಚ್. ಗೌಡ, ತಾಪಂ ಅಧ್ಯಕ್ಷೆ ಸುಜಾತಾ ಗಾಂವ್ಕರ್, ಪುರಸಭೆ ಅಧ್ಯಕ್ಷ ಭಾಸ್ಕರ ನಾರ್ವೇಕರ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ತುಳಸಿ ಗೌಡ, ಜಿಪಂ ಸದಸ್ಯೆ ಉಷಾ ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಜಿಪಂ ಮಾಜಿ ಅಧ್ಯಕ್ಷೆ ಸರಸ್ವತಿ ಗೌಡ, ಪ್ರಮುಖರಾದ ರಮಾನಂದ ನಾಯಕ, ಸಾಯಿ ಗಾಂವ್ಕರ್, ಪಾಂಡುರಂಗ ಗೌಡ, ಸುಕ್ರಿ ಗೌಡ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಚಿವ ಆರ್.ವಿ. ದೇಶಪಾಂಡೆ, ಶಾಸಕ ಸತೀಶ್ ಸೈಲ್, ಮಾಜಿ ಶಾಸಕ ಕೆ.ಎಚ್. ಗೌಡ. ಇಂಜಿನಿಯರ್‌ಗಳಾದ ವಿ.ಎಸ್. ವೆರ್ಣೇಕರ್, ಆರ್.ಜಿ. ಗುನಗಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಭಾಸ್ಕರ ಗೌಡ ಸಂಗಡಿಗರು ಪ್ರಾರ್ಥಿಸಿದರು. ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಂ.ಎಚ್. ಸ್ವಾಗತಿಸಿದರು. ಕೋಶಾಧ್ಯಕ್ಷ ರಮೇಶ ಗೌಡ ಬಿಣಗಾ ಪರಿಚಯಿಸಿದರು. ಸಹ ಕಾರ್ಯದರ್ಶಿ ಪುರುಷೋತ್ತಮ ಗೌಡ ಕಾರ್ಯಕ್ರಮ ನಿರ್ವಹಿಸಿದರು.







