ಸ್ವಾತಂತ್ರ ಹೋರಾಟಗಾರರ ಆದರ್ಶ ಪಾಲನೆಗೆ ನಾಗರಾಜ್ ಕರೆ
ಮಕ್ಕಳ ಚಿತ್ರ ಕಲಾ ಸ್ಪರ್ಧೆ

ಸೊರಬ, ಆ.14: ಸ್ವಾತ್ರಂತ್ಯ ದಿನೋತ್ಸವವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನೆನಪಿಸಿಕೊಳ್ಳುವ ದಿನವಾಗಬೇಕು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಕೊಳ್ಳಬೇಕು ಎಂದು ಕಲಾವಿದ ನಾಗರಾಜ್ ಜೈನ್(ಬಣ್ಣದ ಬಾಬು) ನುಡಿದರು.
ಪಟ್ಟಣದ ದತ್ತ ಮಂದಿರದಲ್ಲಿ ನಮ್ಮೂರ ಸಮುದಾಯ ಅಭಿವೃದ್ಧಿ ಸಂಸ್ಥೆ ಹಾಗೂ ನಮ್ಮೂರ ಸಹಕಾರಿ ಸಂಘದ ವತಿಯಿಂದ 70ನೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಮಕ್ಕಳ ಚಿತ್ರ ಕಲಾ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವತಂತ್ರವಾಗಿ ಜೀವನ ಸಾಗಿಸುವ ರಾಷ್ಟ್ರದ ಜನತೆ ಸ್ವಾತಂತ್ರ್ಯ ಪಡೆಯುವಲ್ಲಿ ಹಗಲಿರುಳು ಹೋರಾಟ ಮಾಡಿದ ರಾಷ್ಟ್ರ ನಾಯಕರನ್ನು ಮರೆಯದೇ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಈ ದೃಷ್ಟಿಯಿಂದ ರಾಷ್ಟ್ರನಾಯಕರ ವ್ಯಕ್ತಿ ಚಿತ್ರಗಳನ್ನು ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿರುವುದು ಔಚಿತ್ಯಪೂರ್ಣವಾಗಿದೆ. ಪರಿಸರವನ್ನು ಮನುಷ್ಯ ತನ್ನ ಹಿತಕ್ಕೋಸ್ಕರ ಮುಂದಾಲೋಚನೆ ಇಲ್ಲದೆ ನಾಶಮಾಡುತ್ತಿರುವುದರಿಂದ ಬದುಕು ನಶ್ವರವಾಗುತ್ತಿದೆ. ಪ್ರತಿಯೊಬ್ಬರಿಗೂ ಹಸಿರು ಜೀವನದ ಉಸಿರಾಗಬೇಕು. ಇದನ್ನು ಮಕ್ಕಳು ಮೈಗೂಡಿಸುವ ಸಲುವಾಗಿ ಪ್ರಕೃತಿ ಬಗ್ಗೆ ತಮಗಿಷ್ಟವಾದ ಚಿತ್ರಗಳನ್ನು ಬಿಡಿಸುವುದಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಚಿತ್ರಕಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆ.15ರಂದು ನಡೆಯುವ ಸಾರ್ವಜನಿಕ ಸ್ವಾತಂತ್ರ್ಯೋತ್ಸವ ವೇದಿಕೆಯಲ್ಲಿ ಬಹುಮಾನ ವಿತರಿಸಲಾಗುತ್ತದೆ. ನಮ್ಮೂರ ಸಮುದಾಯ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸದಸ್ಯರಾದ ಮಹೇಶ್ ಆಚಾರ್, ಎಚ್. ಆನಂದ, ಕೆ.ಎಂ.ಗಂಧರ್ವ, ಎಂ.ಸಿ.ರಮೇಶ್, ಮುಕುಂದ ಗೋಖಲೆ, ಪ್ರವೀಣ, ಅಮೋಘ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







