ಹೆಮ್ಮಾಡಿ ಎಟಿಎಂ ಕಳವಿಗೆ ಯತ್ನ: ಆರೋಪಿ ಬಂಧನ
ಕುಂದಾಪುರ, ಆ.14: ಹೆಮ್ಮಾಡಿ ಗ್ರಾಮದ ಕೆಲ್ವಿನ್ ಮೆಂಡೋನ್ಸಾರವರ ಕಟ್ಟಡದಲ್ಲಿರುವ ಟಾಟಾ ಕಮ್ಯುನಿಕೇಶನ್ ಕಂಪೆನಿಯ ಎಟಿಎಂ ಕಳವಿಗೆ ಯತ್ನಿಸಿದ್ದ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮೂಲತಃ ಕುಂಭಾಶಿ ಕೊರವಡಿ ನಿವಾಸಿ ಶೇಖರ್ ಪೂಜಾರಿ(36) ಎಂದು ಗುರುತಿಸಲಾಗಿದೆ. ಪ್ರಸ್ತುತ ಪತ್ನಿ ಮನೆಯಾದ ಹೆಮ್ಮಾಡಿಯಲ್ಲಿ ವಾಸವಾಗಿರು ಶೇಖರ್, ಆ.13ರಂದು ರಾತ್ರಿ ವೇಳೆ ಎಟಿಎಂಗೆ ನುಗ್ಗಿ ಯಂತ್ರದ ಮುಂದಿನ ಬಾಗಿಲು ಮತ್ತು ಲಾಕರ್‌ನ್ನು ಒಡೆದು ಕೇಬಲ್ ಹಾಗೂ ಮಾನಿಟರ್ ಜಖಂಗೊಳಿಸಿ ಕಳವಿಗೆ ಯತ್ನಿಸಿದ್ದನು. ಇದರಿಂದ ಕಂಪೆನಿಗೆ 45,000ರೂ. ಉಂಟಾಗಿತ್ತು.
ಈ ಬಗ್ಗೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿ ಯಾದರು. ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ಕುಂದಾಪುರ ಎಸ್ಸೈ ನಾಸೀರ್ ಹುಸೇನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಹೆಮ್ಮಾಡಿಯ ಮೀನು ಮಾರುಕಟ್ಟೆ ಬಳಿ ನಿರ್ಮಾಣವಾಗುತ್ತಿ ರುವ ವಾಣಿಜ್ಯ ಸಂಕೀರ್ಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶೇಖರ್, ಅಲ್ಲೇ ಪಕ್ಕದ ಸಂಕೀರ್ಣದಲ್ಲಿದ್ದ ಎಟಿಎಂ ಕೇಂದ್ರದ ಮೇಲೆ ಕಣ್ಣಿಟ್ಟಿದ್ದನು. ಕುಡಿತ ಚಟ ಹೊಂದಿದ್ದ ಈತ ಹಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.







