ಇಂದಿನಿಂದ ಕುಸ್ತಿ ಸ್ಪರ್ಧೆ ಆರಂಭ
ಯೋಗೇಶ್ವರ್, ನರಸಿಂಗ್ ಮೇಲೆ ನಿರೀಕ್ಷೆಯ ಭಾರ

ರಿಯೋ ಡಿ ಜನೈರೊ, ಆ.14: ಭಾರತ ಸೋಮವಾರ ಒಲಿಂಪಿಕ್ಸ್‌ನಲ್ಲಿ ಕುಸ್ತಿಯಲ್ಲಿ ಅಭಿಯಾನ ಆರಂಭಿಸಲಿದ್ದು, ಡೋಪಿಂಗ್ ಆರೋಪದಿಂದ ಮುಕ್ತವಾಗಿರುವ ನರಸಿಂಗ್ ಯಾದವ್ ಹಾಗೂ ಸತತ ಎರಡನೆ ಒಲಿಂಪಿಕ್ಸ್ ಪದಕದ ಮೇಲೆ ಕಣ್ಣಿಟ್ಟಿರುವ ಯೋಗೇಶ್ವರ್ ದತ್ತ್ ಮೇಲೆ ನಿರೀಕ್ಷೆಯ ಭಾರ ಇಡಲಾಗಿದೆ.
ಒಲಿಂಪಿಕ್ಸ್ ಆರಂಭವಾಗಿ ವಾರ ಗತಿಸಿದರೂ 100ಕ್ಕೂ ಅಥ್ಲೀಟ್‌ಗಳನ್ನು ಕಣಕ್ಕಿಳಿಸಿರುವ ಭಾರತಕ್ಕೆ ಈ ತನಕ ಒಂದೂ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಕುಸ್ತಿಪಟುಗಳ ಮೇಲೆ ಪದಕದ ಭರವಸೆ ಇಡಲಾಗಿದೆ.
2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಕುಸ್ತಿಪಟುಗಳು ಎರಡು ಪದಕ ಜಯಿಸಿದ್ದರು. ಆದರೆ, ಭಾರತದ ಕುಸ್ತಿಪಟುಗಳ ಒಲಿಂಪಿಕ್ಸ್ ಪೂರ್ವ ತಯಾರಿ ಆಶಾದಾಯಕವಾಗಿರಲಿಲ್ಲ. ಯುವ ಕುಸ್ತಿಪಟು ನರಸಿಂಗ್ ಸುತ್ತ ಡೋಪಿಂಗ್ ಷಡ್ಯಂತ್ರ ಸುತ್ತುವರಿದಿತ್ತು. ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಸುಶೀಲ್ ಕುಮಾರ್ ಟ್ರಯಲ್ಸ್ ಬೇಡಿಕೆ ಮುಂದಿಟ್ಟುಕೊಂಡು ನರಸಿಂಗ್ ವಿರುದ್ಧ ದಿಲ್ಲಿ ಹೈಕೋರ್ಟ್ ಮೆಟ್ಟಿಲನ್ನು ಏರಿದ್ದರು. ಕೋರ್ಟ್ ನರಸಿಂಗ್ ಪರ ತೀರ್ಪು ನೀಡಿತ್ತು.
ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಯೋಗೇಶ್ವರ್ ಈ ವರ್ಷ ಕೊನೆಯ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನರಸಿಂಗ್ ಹಾಗೂ ಯೋಗೇಶ್ವರ್‌ರಲ್ಲದೆ ಸಂದೀಪ್ ಥೋಮರ್(57 ಕೆಜಿ ಫ್ರೀಸ್ಟೈಲ್)ಹರ್ದೀಪ್ ಸಿಂಗ್ ಹಾಗೂ ರವೀಂದ್ರ ಖತ್ರಿಗೆ ಪದಕ ಗೆಲ್ಲುವ ಅವಕಾಶವಿದೆ.
ಮಹಿಳೆಯರ ಕುಸ್ತಿಯಲ್ಲಿ ವಿನೇಶ್(48ಕೆಜಿ) ಹಾಗೂ ಬಬಿತಾ ಕುಮಾರಿ(53 ಕೆಜಿ) ಅವರು ಸಾಕ್ಷಿ ಮಲಿಕ್(58 ಕೆಜಿ) ಅವರೊಂದಿಗೆ ಸ್ಪರ್ಧಾ ಕಣಕ್ಕಿಳಿಯಲಿದ್ದಾರೆ.





