‘ಸ್ವರಾಜ್ಯ ವಿಜಯ’ ತಾಳಮದ್ದಳೆ
ಉುಪಿ, ಆ.14: 70ನೆ ಸ್ವಾತಂತ್ರೋತ್ಸವದ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಆಯೋಜಿಸಲಾದ ಇತಿಹಾಸದ ಮರುಸೃಷ್ಟಿ ‘ಸ್ವರಾಜ್ಯ ವಿಜಯ’ ಯಕ್ಷಗಾನ ತಾಳಮದ್ದಳೆಯನ್ನು ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
1947ರ ರಾತ್ರಿ ಪ್ರಥಮ ಸ್ವಾತಂತ್ರೋ ತ್ಸವದ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ‘ನವಭಾರತ’ ಪತ್ರಿಕೆಯ ಸಂಪಾ ದಕರಾಗಿದ್ದ ಎಂ.ವಿ.ಹೆಗ್ಡೆ ರಚಿಸಿ ಪ್ರಕಟಿಸಿರುವ ‘ಸ್ವರಾಜ್ಯ ವಿಜಯ’ ಕೃತಿಯ ತಾಳಮದ್ದಳೆಯನ್ನು ಶ್ರೀಅನಂತೇಶ್ವರ ದೇವಸ್ಥಾನದ ಹೆಬ್ಬಾಗಿಲಿನಲ್ಲಿ ಪ್ರದರ್ಶಿಸಲಾಗಿತ್ತು. ಇದರಲ್ಲಿ ಪೇಜಾವರ ಶ್ರೀ ಪಾಲ್ಗೊಂಡು ಹರಸಿದ್ದರು. ಇದೀಗ ಇತಿಹಾಸದ ಮರುಸೃಷ್ಟಿ ಎಂಬ ಕಾರ್ಯಕ್ರಮದಡಿ 70ನೆ ಸ್ವಾತಂತ್ರೋತ್ಸವ ಹಾಗೂ ಪೇಜಾವರ ಶ್ರೀಗಳ 5ನೆ ಪರ್ಯಾಯ ಮಹೋತ್ಸವದ ಸಂದರ್ಭ ಮತ್ತೊಮ್ಮೆ ಆ ತಾಳಮದ್ದಳೆ ಪ್ರಸಂಗವನ್ನು ರಾಜಾಂಗಣದಲ್ಲಿ ಪ್ರದರ್ಶಿಸಲಾಯಿತು.
ಇದಕ್ಕೂ ಮುನ್ನ ನಡೆದ ಅಪೂರ್ವ ಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀವಿಶ್ವೇಶತೀರ್ಥ ಹಾಗೂ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ರಮೇಶ್ ಬಂಗೇರ, ಉದಯ ಕುಮಾರ್ ಶೆಟ್ಟಿ, ಸಂಯೋಜಕ ಸುಧಾಕರ ಆಚಾರ್ಯ ಉಪಸ್ಥಿತರಿದ್ದರು. 1947 ಸ್ವಾತಂತ್ರೋತ್ಸವ ಹೋರಾಟ ದಲ್ಲಿ ಪಾಲ್ಗೊಂಡ ಹಾಗೂ ವರದಿ ಮಾಡಿದ ಪತ್ರಕರ್ತರು ಮತ್ತು ಅದಕ್ಕೆ ಸಾಕ್ಷಿಯಾದವರ ಮಕ್ಕಳನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಮನೋಹರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







