ಕಾಶ್ಮೀರದ ಇನ್ನೂ ಹಲವೆಡೆ ಕರ್ಫ್ಯೂ ವಿಸ್ತರಣೆ
ಶ್ರೀನಗರ, ಆ.14: ನಗರದ ಕೇಂದ್ರ ಭಾಗಕ್ಕೆ ಮೆರವಣಿಗೆಯೊಂದನ್ನು ನಡೆಸುವ ಪ್ರತ್ಯೇಕತಾವಾದಿಗಳ ಕರೆಯನ್ನು ಅನುಲಕ್ಷಿಸಿ ಇಂದು ಕಾಶ್ಮೀರದ ಹಲವು ಭಾಗಗಳಿಗೆ ಕರ್ಫ್ಯೂವನ್ನು ವಿಸ್ತರಿಸಲಾಗಿದೆ. ಕಣಿವೆಯ ಉಳಿದೆಡೆ ಜನರ ಚಲನವಲನಗಳ ಮೇಲಿನ ನಿರ್ಬಂಧ ಜಾರಿಯಲ್ಲಿದೆ.
ಶ್ರೀನಗರ ಜಿಲ್ಲೆ ಹಾಗೂ ಅನಂತನಾಗ್ ಪಟ್ಟಣದಲ್ಲಿ ಕರ್ಫ್ಯೂ ಮುಂದುವರಿದಿದೆ. ಕೆಲವು ದುಷ್ಟ ಶಕ್ತಿಗಳು ಲಾಲ್ ಚೌಕಕ್ಕೆ ಮೆರವಣಿಗೆ ನಡೆಸುವಂತೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಇನ್ನೂ ಹಲವು ಪ್ರದೇಶಗಳಿಗೆ ವಿಸ್ತರಿಸಲಾಗಿದೆ ಯೆಂದು ಪೊಲೀಸ್ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
ಕಣಿವೆಯ ಗಂದರ್ಬಾಲ್ ಪಟ್ಟಣ, ಅವಂತಿಪುರ, ತ್ರಾಲ್, ಪಾಂಪೋರ್, ಬಾರಾಮುಲ್ಲಾ ಪಟ್ಟಣ, ಸೋಪೋರ್ ಪಟ್ಟಣ, ಬಂಡಿಪೋರ್ ಪಟ್ಟಣ, ಕಲೂಸಾ, ಪಾಪ್ಚಾನ್ ಹಾಗೂ ಅಜಾರ್ ಪ್ರದೇಶಗಳಿಗೆ ವಿಸ್ತರಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ನಿನ್ನೆ ಕೆಲವು ಘರ್ಷಣೆಗಳು ನಡೆದಿರುವ ಕಾರಣ ಬದ್ಗಾಂವ್ ಜಿಲ್ಲೆಯ ಬೀರ್ವಾದ ವಾರ್ಗಾಂವ್ ಪ್ರದೇಶದಲ್ಲೂ ಕರ್ಫ್ಯೂ ಹೇರಲಾಗಿದೆ. ಕಣಿವೆಯಲ್ಲಿ ನಿನ್ನೆಯಿಂದ ಅಂತರ್ಜಾಲ ಹಾಗೂ ಮೊಬೈಲ್ ಸೇವೆಗಳನ್ನು ಅಮಾನತುಗೊಳಿಸಲಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ. 37ನೆ ದಿನವಾದ ಇಂದೂ ಕಾಶ್ಮೀರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.





