ಬಿಜೆಪಿ ಕಾರ್ಯಕರ್ತನ ಸಾವು: ಜಿಲ್ಲಾಧಿಕಾರಿ, ಎಸ್ಪಿ ಅಮಾನತು
ಲಕ್ನೋ, ಆ.14: ಬಲಿಯಾ ಜಿಲ್ಲೆಯ ನರಹಿ ಪ್ರದೇಶದಲ್ಲಿ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ಪಕ್ಷದ ಓರ್ವ ಬಿಜೆಪಿ ಬೆಂಬಲಿಗ ಸಾವನ್ನಪ್ಪಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಸರಕಾರವು ಕರ್ತವ್ಯಚ್ಯುತಿಯ ಆರೋಪದಲ್ಲಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಕೆ.ಝಾ ಅವರನ್ನು ಅಮಾನತುಗೊಳಿಸಿದೆ.
ಶನಿವಾರ ತಡರಾತ್ರಿ ಸರಕಾರವು ಈ ಬಗ್ಗೆ ಆದೇಶವನ್ನು ಹೊರಡಿಸಿದೆ ಎಂದು ಅಧಿಕೃತ ವಕ್ತಾರರೋರ್ವರು ರವಿವಾರ ಇಲ್ಲಿ ತಿಳಿಸಿದರು.
ಶುಕ್ರವಾರ ನರಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗೋಸಾಗಾಟದ ವಾಹನವನ್ನು ವಶಪಡಿಸಿಕೊಂಡಿದ್ದ ಪೊಲೀಸರು ಬಿಜೆಪಿ ಕಾರ್ಯಕರ್ತ ಚಂದ್ರಮಾ ಯಾದವ್ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದನ್ನು ವಿರೋಧಿಸಿ ಸ್ಥಳೀಯ ಬಿಜೆಪಿ ಶಾಸಕ ಉಪೇಂದ್ರ ತಿವಾರಿ ಮತ್ತು ಯಾದವ್ ಸೇರಿದಂತೆ ಅವರ ಬೆಂಬಲಿಗರು ಪೊಲೀಸ್ ಠಾಣೆಯ ಎದುರು ಧರಣಿ ಕುಳಿತಿದ್ದರು. ಅವರನ್ನು ಸಮಾಧಾನಗೊಳಿಸುವ ಎಲ್ಲ ಪ್ರಯತ್ನಗಳು ವಿಫಲಗೊಂಡಾಗ ಪೊಲೀಸರು ಅಲ್ಲಿಂದ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ,ಪೊಲೀಸರು ಅಶ್ರುವಾಯು ಪ್ರಯೋಗಿಸಿ,ರಬ್ಬರ್ ಗುಂಡುಗಳನ್ನು ಹಾರಿಸಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತನೋರ್ವ ಸಾವನ್ನಪ್ಪಿದ್ದ.







