ಮೌಡ್ಯರಹಿತ, ಹಸಿವು ಮುಕ್ತ ಭಾರತ ನಮ್ಮದಾಗಲು ಶ್ರಮಿಸುವೆ
ನಾನು ಭಾರತದ ಪ್ರಧಾನಿಯಾದರೆ...

ಭಾರತ ಒಂದು ದೇಶವಾಗಿ ಬ್ರಿಟಿಷ್ ಆಳ್ವಿಕೆ ಎಂಬ ದಾಸ್ಯದಲ್ಲೇ ರೂಪುಗೊಂಡಿದ್ದರಿಂದ ನಮ್ಮ ದೇಶವಾಸಿಗಳಿಗಿನ್ನೂ ದಾಸ್ಯದ ಮನೋಭಾವ ಉಳಿದುಕೊಂಡಿದೆ. ಆದ್ದರಿಂದಲೇ ದೇಶವು ಅಂದು ಬ್ರಿಟಿಷರ ಕೈಯಿಂದ ಸ್ವತಂತ್ರವಾಗಿದ್ದರೂ ಎಲ್ಲಾ ಜನರಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ. ಮೂಲಭೂತ ಸೌಕರ್ಯಗಳು ಇನ್ನೂ ಬಹುಪಾಲು ಜನರಿಗೆ ದೊರಕದಿರುವಾಗ ನಾವು ಸ್ವಾತಂತ್ರ್ಯ ದಿನವನ್ನು ಸಂಭ್ರಮಿಸುವುದು ಸಾಧ್ಯವಿಲ್ಲ. ಬ್ರಿಟಿಷರ ಕೈಯಿಂದ ದೇಶ ಸ್ವತಂತ್ರವಾಗಿದೆ. ಆದರೆ ಇಲ್ಲಿನ ಜನರಿಗೆ ಸ್ವಾತಂತ್ರ್ಯ ಸಿಕ್ಕಿದೆಯೇ? ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಆ ಸಂದರ್ಭದಲ್ಲೇ ಹೇಳಿದ ಮಾತು ದೇಶದ ಎಲ್ಲಾ ಜನರಿಗೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಮರೀಚಿಕೆಯಾಗಿರುವಾಗ ದೇಶ ಸ್ವತಂತ್ರವಾಗಿದೆ ಎನ್ನುವುದರ ಬದಲು ಅಧಿಕಾರ ನಮ್ಮದಾಗಿದೆ. ಅಂದರೆ ಸ್ವಾತಂತ್ರ್ಯ. ಬ್ರಿಟಿಷರ ಬದಲು ಈ ದೇಶದ ಬಲಾಢ್ಯರ ಕೈಗೆ ಸಿಗಲಿದೆ. ಆದುದರಿಂದ ಶೋಷಿತರ ಕೈಗೆ ಸ್ವಾತಂತ್ರ್ಯ ಸಿಗಲಾರದು.
ದೇಶದ ಸ್ಥಿತಿ ಕಳೆದ ಅರವತೊಂಬತ್ತು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗೆ ಒಳಪಟ್ಟಿರುವುದು ನಿಜವಾದರೂ ಸಂವಿಧಾನದ ನಿರ್ದೇಶಿತ ತತ್ವಗಳ ನಿರ್ದೇಶನದಂತೆ ಸಂವಿಧಾನರೂ ಪಿತವಾಗಿಲ್ಲ ಮತ್ತು ಅದರಂತೆ ಆಡಳಿತ ನಡೆದಿಲ್ಲ, ನಡೆದಿದ್ದರೂ ಸಂಪೂರ್ಣವಾಗಿಲ್ಲ ಮತ್ತು ಆ ತತ್ವಗಳನ್ನು ಅಳವಡಿಸಿಕೊಳ್ಳುವ ಬದಲು ಬೇರೇ ಉದ್ದೇಶಗಳಿಗಾಗಿ ಸಂವಿಧಾನದ ತಿದ್ದುಪಡಿ ನೂರಾರು ಬಾರಿ ಆಗಿದೆ.
ಡಾ. ಬಾಬಾಸಾಹೇಬರ ಇನ್ನೊಂದು ಮಾತಿಗನುಗುಣವಾಗಿ ಹೇಳುವುದಾದರೆ, ಇತಿಹಾಸವನ್ನು ಅರ್ಥೈಸಲಾಗದವರು ಇತಿಹಾಸವನ್ನು ಸೃಷ್ಟಿಸಲಾಗದು. ಬ್ರಿಟಿಷರ ಆಳ್ವಿಕೆಯ ನಂತರ ನಮ್ಮವರ ಕೈಯಲ್ಲಿ ಸ್ವತಂತ್ರ ಅಧಿಕಾರ ಬಂದು ಅರವತ್ತೊಂಬತ್ತು ವರ್ಷಗಳನ್ನು ಕಳೆದಿದ್ದೇವೆ. ಈ ಅರವತ್ತೊಂಬತ್ತು ವರ್ಷಗಳ ಇತಿಹಾಸದಲ್ಲಿ ಭಾರತ ಏನೆಲ್ಲಾ ಸಾಧನೆ ಮಾಡಿದೆ. ಸಾವಿರದ ಒಂಬೈನೂರ ಐವತ್ತೊಂದರ ಮೊದಲ ಚುನಾವಣೆಯಿಂದ ಎರಡು ಸಾವಿರದ ಹದಿನಾಲ್ಕರ ಚುನಾವಣೆಯವರೆಗೆ ಆಗಿ ಹೋದ ಪ್ರಧಾನಿಗಳೂ ಹತ್ತಾರು ಜನ. ಆದರೂ ಭಾರತ ಬಡದೇಶವಾಗಿಯೇ ಉಳಿದಿದೆ. ಬಡದೇಶ ಆಗಿ ಉಳಿದಿದೆ. ಅಂತಹ ಹೇಳಿಕೊಳ್ಳುವುದನ್ನೂ ಹಿಂಜರಿಕೆಯ ಬದಲು ಅಭಿಮಾನದಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೀವಾ? ಬಡತನವಿದ್ದರೂ ಸ್ವತಂತ್ರ, ಸ್ವಾಭಿಮಾನಗಳೂ ಇಲ್ಲವಾಗುತ್ತದೆ ಅಂತಾಗಲು ಕಾರಣವೇನು? ಎನ್ನುವುದರ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಒಂದು ರೀತಿಯ ವಿಶಿಷ್ಟ ಮತ್ತು ಅಪರೂಪದ ನಾಗರಿಕ ಪದ್ಧತಿಯ, ಭಿನ್ನಭಿನ್ನ ಸಂಸ್ಕೃತಿಯ, ಭೌಗೋಳಿಕವಾಗಿಯೂ ಭಿನ್ನತೆಯಿಂದ ಕೂಡಿರುವ ದೇಶ ಒಂದು ರೀತಿಯಲ್ಲಿ ಸಂಯುಕ್ತ ರಾಷ್ಟ್ರವಾಗಬೇಕಿತ್ತಾದರೂ ಆಗದೇ ಉಳಿದಿರುವುದೇ ನಮ್ಮ ಸಮಸ್ಯೆಗಳಿಗೆ ಕಾರಣವೇ? ಹಾಗಿದ್ದಲ್ಲಿ ಅದನ್ನು ಬದಲಾಗಿಸಲು ನಮ್ಮಿಂದ್ಯಾಕೆ ಸಾಧ್ಯವಾಗಿಲ್ಲ? ಎಂದು ಪುನರ್ವಿಮರ್ಶೆ ಮಾಡಬೇಕಾದ ಅನಿವಾರ್ಯತೆ ನಮ್ಮದು.
ಸ್ವತಂತ್ರ, ಸ್ವಾಭಿಮಾನಿ, ಸಾರ್ವಭೌಮ ರಾಷ್ಟ್ರವಾಗಿರುವ ದೇಶದ ಜನರನ್ನು ಕಾಡುತ್ತಿರುವ ಬಡತನ, ನಿರುದ್ಯೋಗ, ಬೆಲೆ ಏರಿಕೆ, ವಸತಿ, ಕುಡಿಯುವ ನೀರು ಎಲ್ಲರಿಗೂ ಸರಿಯಾಗಿ ಸಿಗುವಂತಾದರೆ ಮಾತ್ರ ಅವರೂ ಸ್ವತಂತ್ರ, ಸ್ವಾಭಿಮಾನಿ ಪ್ರಜೆಗಳಾಗಬಹುದು
ಅವೇ ಇಲ್ಲದೇ, ಆ ಜನರು ಬಳಲುತ್ತಲೇ ಇದ್ದರೆ ದೇಶ ಸ್ವಾತಂತ್ರ್ಯವನ್ನು ಆಚರಿಸಿಕೊಂಡೇನು ಪ್ರಯೋಜನ?
ಒಂದು ಕಡೆ ವೈಜ್ಞಾನಿಕ ಮುನ್ನಡೆಯಲ್ಲಿರುವ ನಾವು ನಿರಕ್ಷರರನ್ನೂ ಹೊಂದಿದ್ದೇವೆ. ಸಮಾಜವಾದಿ ಸಿದ್ಧಾಂತ ಇಂದು ಬಂಡವಾಳಶಾಹಿ ಸಿದ್ಧಾಂತವಾಗಿ ಬದಲಾಗಿದೆ. ಸಹಕಾರಿ ಮತ್ತು ಸರಕಾರದ ಕೈಯಲ್ಲಿದ್ದ ಕಂಪೆನಿಗಳು ಈಗ ಖಾಸಗಿಯವರ ಪಾಲಾಗುತ್ತಿದೆ. ಇದರಿಂದ ನಿರುದ್ಯೋಗದ ಬವಣೆ ನೀಗುತ್ತಿಲ್ಲ. ನಿರಕ್ಷರರಾಗಿ ಇರುವ ಜನರ ಬವಣೆಗೆ ಪರಿಹಾರ ಇದರಿಂದಾಗಿ ಸಿಗುತ್ತಿಲ್ಲ.
ದೇಶದ ಸಂವಿಧಾನವು ಧರ್ಮ ನಿರಪೇಕ್ಷತೆ ಜಾತ್ಯತೀತತೆಯನ್ನು ಒಳಗೊಂಡಿದ್ದರೂ ದೇಶದಲ್ಲಿ ಏಕಧರ್ಮವನ್ನು ಬಲವಂತವಾಗಿ ಹೇರುವ ಪ್ರಯತ್ನಗಳನ್ನು 1991 ರಲ್ಲಿ ಜಾಗತೀಕರಣಕ್ಕೆ ಭಾರತದ ಬಾಗಿಲು ತೆರೆದುಕೊಂಡ ಪರಿಣಾಮವಾಗಿ ಧರ್ಮ ನಿರಪೇಕ್ಷತೆ, ಜಾತ್ಯತೀತ ವ್ಯವಸ್ಥೆಗಳು ಮುಂದಕ್ಕೆ ಚಲಿಸುವ ಬದಲು ಹಿಂದಕ್ಕೆ ಚಲಿಸುತ್ತಿವೆ. ಏಕಧರ್ಮವನ್ನು ಹೇರುವ, ಜಾತಿವಾದವನ್ನು ಜಾರಿಯಲ್ಲಿಡಲು ವ್ಯವಸ್ಥಿತ ಸಂಚು ತೀವ್ರವಾಗಿ ನಡೆಯುತ್ತಿದೆ. ಇದನ್ನು ಹತ್ತಿಕ್ಕದೇ ಇದ್ದಲ್ಲಿ ದೇಶದ ಅಖಂಡತೆಗೆ ಕುತ್ತು ತರಲಿದೆ. ಇದರಿಂದಾಗಿ ಇರುವ ಸ್ವಾತಂತ್ರ್ಯದ ಹರಣವಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದ್ದರೂ ನೇರ – ಸತ್ಯನುಡಿಯುವವರ ಬಂಧನವಾಗುತ್ತಿದೆ
ಸ್ವಾತಂತ್ರ್ಯ ಎನ್ನುವುದು ಕೇವಲ ಭಾವನಾತ್ಮಕ ವಿಷಯವಾಗಿಬಿಟ್ಟಿದೆ. ಬವಣೆಯಿಂದ ಬಳಲುತ್ತಿರುವ, ಜಾತಿ- ಮತ- ಧರ್ಮ- ಲಿಂಗಾಧಾರಿತ ಅಸಮಾನತೆ ದೌರ್ಜನ್ಯಗಳನ್ನು ನಡೆಸುತ್ತಿದೆ. ಬಹಿರಂಗವಾಗಿ ಅಸ್ಪೃಶ್ಯತಾ ಆಚರಣೆ, ಮರ್ಯಾದ ಹತ್ಯೆಗಳು, ಖಾಸಗಿ ಕಂಪೆನಿಗಳಲ್ಲಿ ನೇಮಕಾತಿ ಇತ್ಯಾದಿಗಳು ಜಾತಿಕೇಂದ್ರಿತವಾಗಿದ್ದರೆ, ತಿನ್ನುವ ಆಹಾರ, ತೊಡುವ ತೊಡುಗೆ, ಧಾರ್ಮಿಕ ನಂಬಿಕೆಗಳ ಆಚರಣೆ ಧರ್ಮದ ನೆಲೆಯಲ್ಲಿ ಅಸಹಿಷ್ಣುತೆಯನ್ನು ಬಹಿರಂಗಗೊಳಿಸುತ್ತಿವೆ. ಹಸಿದವರಿಗೆ ಅನ್ನ ನೀಡದ, ಬಡವರ ಕಣ್ಣೀರು ಒರೆಸದ, ಅಸಹಾಯಕರಿಗೆ ನೆರವು ನೀಡದ ಧರ್ಮ ಮತ್ತು ದೇವರನ್ನು ನಾನು ನಂಬೊಲ್ಲ ಎಂದ ಸ್ವಾಮಿ ವಿವೇಕಾನಂದರ ಹೆಸರನ್ನೂ ಧಾರ್ಮಿಕ ಅಸಹನೆಗೆ ಬಳಸುತ್ತಾ, ನಾನೇಕೆ ನಾಸ್ತಿಕ ಎಂದು ಬರೆದ ದೇಶದ ಸ್ವಾತಂತ್ರ್ಯಕ್ಕೆ ಧರ್ಮದ ಹಂಗು ಬೇಡವೆಂದು ಅಬ್ಬರಿಸಿದ್ದ ಭಗತ್ ಸಿಂಗರು ಇಂದು ಧಾರ್ಮಿಕ ಅಸಹಿಷ್ಣುಗಳ ದಾಳವಾಗಿ ಬಳಕೆಯಾಗುತ್ತಿದ್ದಾರೆ. ಇದನ್ನು ಬದಲಿಸುವ ಸ್ವಾತಂತ್ರ್ಯ ನನಗೊಂದು ಬೇಕಾಗಿದೆ
ರಟ್ಟೆ ಬಲದ ತಾಕತ್ತನ್ನು ನಂಬಿ ಕೃಷಿಯಲ್ಲಿ ತೊಡಗಿರುವ ರೈತಾಪಿ ವರ್ಗಗಳ ಭೂಮಿಯನ್ನು ಅವರಿಂದ ಖಾಸಗಿ ಕಂಪೆನಿಗಳಿಗೆ ಒದಗಿಸುವ ಅಭಿವೃದ್ಧಿಯ ಭ್ರಮೆ ದೇಶದಲ್ಲಿನ ಆಹಾರ ಉತ್ಪಾದನೆಗೆ ತೊಡಕಾದರೇ ಗೋದಾಮುಗಳಲ್ಲಿ ಕೊಳೆಯುತ್ತಿರುವ ಆಹಾರ ಧಾನ್ಯಗಳ ಸಂಗ್ರಹದ ನಡುವೆಯೂ ಒಂದು ಹೊತ್ತಿನ ಗಂಜಿಗೂ ತತ್ವಾರ ಪಡುತ್ತಿರುವ ಜನ ನಮ್ಮಲ್ಲಿದ್ದಾರೆ. ಈ ರೀತಿಯ ಬಲವಂತ-ಅಸಮಾನತೆಗಳು ಎಪ್ಪತ್ತು ವರ್ಷಗಳಲ್ಲೂ ಮುಂದುವರಿಯಬೇಕೇ?
ಕೋಟ್ಯಂತರ ಜನರ ದಿನದ ದುಡಿಮೆ ಐವತ್ತು ರೂಪಾಯಿಗಳಾಗಿರುವಾಗಲೇ ಹತ್ತಾರು ಜನ ವಿಶ್ವದ ಕೋಟ್ಯಾಧಿಪತಿಗಳು ಭಾರತೀಯರು ಇದ್ದಾರೆಂದರೆ ನಮ್ಮ ಸ್ವಾತಂತ್ರ್ಯಕೊಟ್ಟಿದ್ದೇನು?
ಇಂತಹ ಸ್ವಾತಂತ್ರ್ಯದ ಬದಲು ಸರ್ವರಿಗೂ ಸಮ ಪಾಲು-ಸಮ ಬಾಳು ದೊರಕಬೇಕು. ಅಸಮಾನತೆ ತೊಲಗಿ ಸಮಾನತೆ ಸಾಕಾರವಾಗಬೇಕು. ಅದಕ್ಕಾಗಿ ದೇಶದಲ್ಲಿ ಇನ್ನೊಂದು ಸ್ವಾತಂತ್ರ್ಯ ಚಳವಳಿ ನಡೆಯಬೇಕು. ಆ ಚಳವಳಿಯ ಗುರಿ ಬಡತನದಿಂದ ಸ್ವಾತಂತ್ರ್ಯ, ಜಾತಿವಾದದಿಂದ ಸ್ವಾತಂತ್ರ್ಯ, ಬಂಡವಾಳಶಾಹಿಯಿಂದ ಸ್ವಾತಂತ್ರ್ಯ, ಕೋಮುವಾದದಿಂದ ಸ್ವಾತಂತ್ರ್ಯ, ರಾಜಕೀಯ –ಅಧಿಕಾರಶಾಹಿಯಿಂದ ಸ್ವಾತಂತ್ರ್ಯಎಂದಾಗಬೇಕು. ಗಾಂಧಿ ಆಶಿಸಿದ್ದ ಗ್ರಾಮ ಭಾರತ, ಅಂಬೇಡ್ಕರ್ ಆಶಿಸಿದ್ದ ಸಮಾನತೆಯ ಭಾರತ, ಭಗತ್ ಸಿಂಗ್ ವಿವೇಕಾನಂದರ ಧರ್ಮ ನಿರಪೇಕ್ಷ, ಮೌಢ್ಯ ರಹಿತ ಭಾರತ ನಮ್ಮದಾಗಬೇಕು. ಹಾಗಾದಾಗ ಮಾತ್ರ ಭಾರತ ಸ್ವತಂತ್ರ ಸಾರ್ವಭೌಮ ಜಾತ್ಯತೀತ ಭಾರತವಾಗಿ ಬೆಳೆದು ವಿಶ್ವಕ್ಕೆ ಬೆಳಕಾಗುವುದು.







