ಕೆ ಎಫ್ ಸಿ ಆಹಾರ ಸೇವಿಸದಂತೆ ಬರೇಲಿಯ ಮುಸ್ಲಿಂ ವಿದ್ವಾಂಸರ ಸೂಚನೆ

ಆಗ್ರಾ,ಆ.15 : ಬರೇಲಿಯಲ್ಲಿರುವ ಕೆ ಎಫ್ ಸಿ ರೆಸ್ಟೋರೆಂಟಿನಲ್ಲಿ ಗ್ರಾಹಕರಿಗೆ ಒದಗಿಸುವ ಮಾಂಸ ‘ಹಲಾಲ್’ ಆಗಿಲ್ಲದೇ ಇರುವುದರಿಂದ ಮುಸ್ಲಿಮರು ಅದನ್ನು ಸೇವಿಸಬಾರದೆಂದು ಬರೇಲಿಯ ಪ್ರಮುಖ ದರ್ಗಾ-ಇ- ಹಜ್ರತ್ ಸೂಚನೆ ನೀಡಿದೆ. ಇಂತಹ ಮಾಂಸ ಸೇವನೆಯು ‘ಪಾಪ’ಕ್ಕೆ ಸಮಾನವಾಗಿದೆ ಎಂದು ಅದು ಹೇಳಿದೆ. ಅಂತೆಯೇ ಹಲಾಲ್ ನಿಯಮಗಳನ್ನು ಪಾಲಿಸದ ದೇಶದ ಎಲ್ಲಾ ಮಾಂಸಾಹಾರ ರೆಸ್ಟೋರೆಂಟುಗಳಲ್ಲಿ ಆಹಾರ ಸೇವಿಸುವ ಮುಸ್ಲಿಮರಿಗೂ ಈ ಸೂಚನೆ ಅನ್ವಯಿಸುತ್ತದೆಯೆಂದು ದರ್ಗಾದ ವಕ್ತಾರ ಮುಫ್ತಿ ಸಲೀಂ ನೂರಿ ಹೇಳಿದ್ದಾರೆ.
ಬರೇಲಿಯ ಕೆ ಎಫ್ ಸಿ ಯಲ್ಲಿ ಒದಗಿಸಲಾಗುವ ಮಾಂಸ ‘ಹಲಾಲ್’ ಅಲ್ಲವೆಂದು ಹಲವರು ತಮಗೆ ದೂರಿದ್ದಾರೆ ಎಂದು ನೂರಿ ತಿಳಿಸಿದ್ದಾರೆ. ತಮ್ಮ ದರ್ಗಾದ ತಂಡವೊಂದು ಕೆ ಎಫ್ ಸಿ ರೆಸ್ಟೋರೆಂಟಿಗೆ ತೆರಳಿದಾಗ ಅಲ್ಲಿನ ಅಧಿಕಾರಿಗಳು ತಮಗೆಮುಂಬೈನ ಮುಫ್ತಿಯೊಬ್ಬರು ನೀಡಿದ ಪ್ರಮಾಣಪತ್ರ ತೋರಿಸಿದ್ದರು. ಆದರೆ ದರ್ಗಾ ತಂಡ ಆ ಮುಫ್ತಿಯನ್ನು ಸಂಪರ್ಕಿಸಿದಾಗ ತಾನು ಮಾಂಸಾಹಾರ ಒದಗಿಸುವ ಸಂಸ್ಥೆಯೊಂದಕ್ಕೆ ಕೆಲ ವರ್ಷಗಳ ಹಿಂದೆ ಪ್ರಮಾಣಪತ್ರ ನೀಡಿದ್ದರೆಂದು ಹೇಳಿದ್ದರು. ದರ್ಗಾದ ತಂಡ ಆ ಸಂಸ್ಥೆಯನ್ನು ಸಂಪರ್ಕಿಸಿದಾಗ ತಾವು ಕೆ ಎಫ್ ಸಿ ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರೂ ಅದು ಮೂರು ವರ್ಷಗಳ ಹಿಂದೆ ಅಂತ್ಯಗೊಂಡಿತ್ತೆಂದು ತಿಳಿಸಿದ್ದರು. ಈ ಕಾರಣದಿಂದ ಕೆ ಎಫ್ ಸಿ ತೋರಿಸಿದ್ದ ಪ್ರಮಾಣಪತ್ರ ಹಳೆಯದ್ದು ಹಾಗೂ ಊರ್ಜಿತದಲ್ಲಿಲ್ಲವೆಂದು ತಿಳಿಯುತ್ತದೆ ಹಾಗೂ ಅಲ್ಲಿ ಒದಗಿಸಲಾಗುವ ಮಾಂಸ ಹಲಾಲ್ ಅಲ್ಲ ಎಂದು ತಿಳಿಯುತ್ತದೆ’’ಎಂದು ನೂರಿ ಹೇಳಿದ್ದಾರೆ.





