ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣಕ್ಕೆ ಮುಖ್ಯ ನ್ಯಾಯಾಧೀಶರ ಅಸಮಾಧಾನ

ನವದೆಹಲಿ,ಆ.15 : ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನ್ಯಾಯಾಧೀಶರ ನೇಮಕಾತಿ ವಿಚಾರವನ್ನು ಪ್ರಸ್ತಾಪಿಸದೇ ಇರುವುದಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಸ್ .ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘‘ಪ್ರಧಾನಿಯ ಭಾಷಣ ಆಲಿಸಿದೆ, ನ್ಯಾಯಾಧೀಶರ ನೇಮಕಾತಿ ವಿಚಾರದ ಬಗ್ಗೆ ಅವರು ಏನಾದರೂ ಹೇಳಬಹುದೆಂದು ಅಂದುಕೊಂಡಿದ್ದೆ. ನಾನು ನನ್ನ ವೃತ್ತಿ ರಂಗದ ತುತ್ತತುದಿಯನ್ನು ತಲುಪಿದ್ದೇನೆ. ಆದುದರಿಂದ ನನಗೆ ತೋಚಿದ್ದನ್ನು ಹೇಳಲು ನನಗೇನೂ ಹಿಂಜರಿಕೆಯಿಲ್ಲ’’ ಎಂದು ಹೇಳಿದ್ದಾರೆ.
ನ್ಯಾಯಾಧೀಶರ ನೇಮಕಾತಿಯಲ್ಲಾಗುತ್ತಿರುವ ವಿಳಂಬಕ್ಕಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಜಸ್ಟಿಸ್ ಠಾಕೂರ್ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಫೆಬ್ರವರಿಯಿಂದ ಹೈಕೋರ್ಟ್ ನ್ಯಾಯಾಧೀಶ ಹುದ್ದೆಗಳಿಗೆ ನೇಮಕಾತಿಗಾಗಿ 75 ಹೆಸರುಗಳನ್ನು ಕೊಲೀಜಿಯಂ ಸೂಚಿಸಿದ್ದರೂ ಸರಕಾರ ಯಾವುದನ್ನೂ ಅನುಮೋದಿಸದೇ ಇರುವುದು ಸುಪ್ರೀಂ ಕೋರ್ಟಿನ ಆಕ್ರೋಶಕ್ಕೆ ಕಾರಣವಾಗಿತ್ತು.
‘‘ಜಸ್ಟಿಸ್ ಠಾಕೂರ್ ಅವರ ಧೈರ್ಯವನ್ನು ಮತ್ತು ನ್ಯಾಯ ಸಿಗುವಂತೆ ನೋಡಿಕೊಳ್ಳಲು ಅವರಿಗಿರುವ ಕಾಳಜಿಯನ್ನು ನಾನು ಮೆಚ್ಚುತ್ತೇನೆ’’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಟ್ವೀಟ್ ಒಂದರಲ್ಲಿ ಹೇಳಿದ್ದಾರೆ.







