ಪಶ್ಚಿಮ ವಾಹಿನಿ ಯೋಜನೆಯಡಿ 537ಕೋ.ರೂ. ವೆಚ್ಚದಲ್ಲಿ 432 ಅಣೆಕಟ್ಟು ನಿರ್ಮಾಣ: ಪ್ರಮೋದ್
ಪಶ್ಚಿಮವಾಹಿನಿ ಯೋಜನೆ ಅನುಷ್ಟಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ

ಉಡುಪಿ, ಆ.15: ಪಶ್ಚಿಮ ವಾಹಿನಿ ಯೋಜನೆಯಡಿ 537ಕೋಟಿ ರೂ. ವೆಚ್ಚದಲ್ಲಿ 432 ಕಿಂಡಿ ಮತ್ತು ಉಪ್ಪುನೀರು ತಡೆ ಅಣೆಕಟ್ಟುಗಳ ನಿರ್ಮಾಣದ ಬೃಹತ್ ಯೋಜನೆಯನ್ನು ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಸೋಮವಾರ ಉಡುಪಿ ಬೀಡಿನ ಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂದಿರದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವದ ಸಂದೇಶ ನೀಡಿದರು.
3ಕೋಟಿ ರೂ. ಮೊತ್ತದಲ್ಲಿ ಕಡಲ ಕೊರೆತ ತಡೆಗಟ್ಟುವ ಕಾಮಗಾರಿ ಹಾಗೂ 2ಕೋಟಿ ಮೊತ್ತದ ಕಲ್ಸಂಕ ಸೇತುವೆ ಅಗಲೀಕರಣ ಕಾಮಗಾರಿಯ ಕ್ರಿಯಾಯೋಜನೆಗೆ ಮತ್ತು ಜಿಲ್ಲೆಯ 5 ನಗರಸ್ಥಳೀಯ ಸಂಸ್ಥೆಗಳಿಗೆ 18 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಸರಕಾರದಿಂದ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಶೀಘ್ರವೇ ಅನುಷ್ಠಾನಗೊಳಿಸಲಾಗುವುದು ಎಂದರು.
ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸಮಗ್ರ ಕೊಳಚೆ ನೀರು ಜಾಲ ವಿಸ್ತರಣೆ ಸಂಸ್ಕರಣಾ ಘಟಕ ಸ್ಥಾಪಿಸಲು 50ಕೋಟಿ ರೂ. ಅನುದಾನ ನಿಗದಿ ಪಡಿಸ ಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ದಿನದ 24ಗಂಟೆ ನೀರು ಸರಬರಾಜು ಮಾಡಲು ಮುಂದಿನ 30ವರ್ಷಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟು ಕೊಂಡು ಮಣಿಪಾಲ ಸಮೀಪದ ಶಿಂಬ್ರಾ ಸ್ವರ್ಣ ನದಿ ಬಳಿ ಕುಡಿಯುವ ನೀರು ಶುದ್ಧೀಕರಣ ಘಟಕ, ಓವರ್ ಹೆಡ್ ಟ್ಯಾಂಕ್ ವಿಸ್ತರಣಾ ಜಾಲಗಳನ್ನು ನಿರ್ಮಿಸಲು ಜಮೀನು ಗುರುತಿಸಲಾಗಿದೆ. ಈ ಕಾಮಗಾರಿಗೆ 35ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಜನಾಂಗದ ವರ ಅನುಕೂಲಕ್ಕಾಗಿ 15 ಅಂಬೇಡ್ಕರ್ ಭವನವನ್ನು ನಿರ್ಮಾಣ ಮಾಡಲು 8.72ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. 2016-17ನೆ ಸಾಲಿನಲ್ಲಿ ಅಲ್ಪಸಂಖ್ಯಾತರ ಕಾಲೋನಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 100ಕೋಟಿ ರೂ. ಅನುದಾನ ಮೀಸ ಲಿರಿಸಲಾಗಿದೆ ಎಂದು ಅವರು ತಿಳಿಸಿದರು.
ಬಹುಗ್ರಾಮ ಯೋಜನೆ ಪ್ರಸ್ತಾವನೆ
ನಾಡಾ ಗ್ರಾಮದಲ್ಲಿ 27ಕೋ.ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಟೆಂಡರ್ ಮಂಜೂರಾತಿ ಹಂತದಲ್ಲಿದೆ. ಯಡ್ತರೆ ಗ್ರಾಮಗಳ 10.50ಕೋಟಿ ಅನುದಾನ ಬೇಡಿಕೆಯ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಮಾಳ, ಹಿರ್ಗಾನ, ಕಡ್ತಲ, ಕುಕ್ಕುಂದೂರು, ಮರ್ಣೆ, ಮಿಯಾರು, ಶಿವಪುರ, ಯರ್ಲಪಾಡಿ, ಹೊಂಬಾಡಿ ಮಂಡಾಡಿ, ಹೆಜಮಾಡಿ, ತೆಂಕನಿಡಿಯೂರು, ಚಾಂತಾರು ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಸ್ತಾವನೆಗಳನ್ನು ಸರಕಾರಕ್ಕೆ ಸಲ್ಲಿಸಲು ಪ್ರಾಥಮಿಕ ಸಮೀಕ್ಷಾ ವರದಿ ತಯಾರಿ ಸಲಾಗುತ್ತಿದೆ ಎಂದು ಅವರು ಹೇಳಿದರು.
ಅಜ್ಜರಕಾಡು ಕ್ರೀಡಾಂಗಣದ ಬಳಿ 3.50ಕೋಟಿ ರೂ. ಮೊತ್ತದ ಅಂದಾಜು ವೆಚ್ಚದಲ್ಲಿ ಸಿಂಥೆಟಿಕ್ ಲಾನ್ ಟೆನಿಸ್ ಕೋರ್ಟ್‌ನ್ನು ನಿರ್ಮಿಸಲು ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಈ ಕಾಮಗಾರಿಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ 99ಲಕ್ಷ ರೂ. ಮಂಜೂರು ಮಾಡಿ ಪ್ರಥಮ ಕಂತಾಗಿ 75ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಈ ವರ್ಷ ಜಿಲ್ಲೆಯಲ್ಲಿ 19 ಸೇತುವೆಗಳನ್ನು 42.56 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. 2016-17ನೆ ಸಾಲಿನಲ್ಲಿ ಎಸ್‌ಎಚ್‌ಡಿಪಿ ಯೋಜನೆಯಡಿ 71.89ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯನ್ನು 37.50 ಕೋಟಿ ರೂ. ಹಾಗೂ 43.45ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಯನ್ನು 40.52ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಉಪಸ್ಥಿತಿಯಲ್ಲಿ ಸಚಿವರು ಪಥ ಸಂಚಲನ ಹಾಗೂ ಗೌರವ ರಕ್ಷೆ ಸ್ವೀಕರಿಸಿದರು. ಕಳೆದ ಸಾಲಿನ ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪಥ ಸಂಚಲನದಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸ ಲಾಯಿತು. ಧ್ವಜಾರೋಹಣಕ್ಕೂ ಮುನ್ನ ಕೋಟಿ ವೃಕ್ಷ ಆಂದೋಲನದಡಿ ಬಯಲು ರಂಗ ಮಂದಿರದ ಆವರಣದಲ್ಲಿ ಸಚಿವರು ಗಿಡ ನೆಟ್ಟರು. ಕೊನೆ ಯಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಸಾಬೂನು ಮತ್ತು ಮಾರ್ಜಕ ನಿಯಮಿತ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ, ಜಿಪಂ ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ಅನುರಾಧ, ಪೌರಾಯುಕ್ತ ಮಂಜುನಾಥಯ್ಯ ಉಪಸ್ಥಿತರಿದ್ದರು.
ಮಾನವ ನಿರ್ಮಾಣ ನಮ್ಮ ಗುರಿಯಾಗಲಿ
ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಯುವ ಶಕ್ತಿಯನ್ನು ರೂಪಿಸ ಬೇಕಾಗಿದೆ. ನೈತಿಕ ವೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಮೂಲಕ ಸಮಗ್ರ ಮಾನವ ತತ್ವದ ಆಧಾರದಲ್ಲಿ ಈ ದೇಶದ ಪರಂಪರೆಯನ್ನು ಸಂರಕ್ಷಿಸ ಬೇಕು. ಎಲ್ಲ ಶಿಕ್ಷಣದ ಗುರಿ ಮಾನವ ನಿರ್ಮಾಣ ಆಗಬೇಕು ಹಾಗೂ ಕೊನೆಯ ಗುರಿ ಮಾನವನನ್ನು ಬೆಳೆಯುವಂತೆ ಮಾಡಬೇಕು. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪರಿಪೂರ್ಣ ಮಾನವನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಮೋದ್ ಮಧ್ವರಾಜ್ ನುಡಿದರು.







