3,000 ಸ್ಟೀಪಲ್ ಚೇಸ್:ಫೈನಲ್‌ನಲ್ಲಿ ಲಲಿತಾಗೆ 10ನೆ ಸ್ಥಾನ

ರಿಯೋ ಡಿ ಜನೈರೊ, ಆ.15: ರಿಯೋ ಒಲಿಂಪಿಕ್ಸ್‌ನ 10ನೆ ದಿನವಾದ ಸೋಮವಾರ 3000 ಮೀ. ಸ್ಟೀಪಲ್‌ಚೇಸ್‌ನ ಫೈನಲ್‌ನಲ್ಲಿ ಸ್ಪರ್ಧಿಸಿದ ಭಾರತದ ಅಥ್ಲೀಟ್ ಲಲಿತಾ ಬಾಬರ್ 9:22.74 ಸೆಕೆಂಡ್‌ನಲ್ಲಿ ಗುರಿ ತಲುಪಿ 10ನೆ ಸ್ಥಾನಕ್ಕೆ ತೃಪ್ತಿಪಟ್ಟರು. ಅರ್ಹತಾ ಸುತ್ತಿನಲ್ಲಿ 9:19.76ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಲಲಿತಾ ಅದೇ ಪ್ರದರ್ಶನ ಪುನರಾವರ್ತಿಸಲು ವಿಫಲರಾದರು.
ಲಲಿತಾ 10ನೆ ಸ್ಥಾನ ಪಡೆದರೂ 1984ರ ಒಲಿಂಪಿಕ್ಸ್ ಬಳಿಕ ಟ್ರಾಕ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಅಥ್ಲೀಟ್ ಎನಿಸಿಕೊಂಡಿದ್ದಾರೆ. 1984ರಲ್ಲಿ ಪಿ.ಟಿ.ಉಷಾ 400 ಮೀ. ಹರ್ಡಲ್ಸ್‌ನಲ್ಲಿ 4ನೆ ಸ್ಥಾನ ಪಡೆದಿದ್ದರು.
ಒಟ್ಟು 18 ಅಥ್ಲೀಟ್‌ಗಳು ಭಾಗವಹಿಸಿದ್ದ ಫೈನಲ್ ಪಂದ್ಯದಲ್ಲಿ ಕೀನ್ಯ ಮೂಲದ ಬಹರೈನ್‌ನ ರೂತ್ ಜೆಬೆಟ್(8:59.75) ಮೊದಲ ಸ್ಥಾನ ಪಡೆದರೆ, ಕೀನ್ಯದ ಹಿವಿನ್ ಜೆಪ್‌ಕೊಮಾ(9:07.12 ಸೆ.) ಬೆಳ್ಳಿ ಹಾಗೂ ಅಮೆರಿಕದ ಎಮ್ಮಾ ಕೊಬಿನ್(9:07.63 ಸೆ.) ಮೂರನೆ ಸ್ಥಾನ ಪಡೆದರು.
ತ್ರಿಪಲ್‌ಜಂಪ್‌ನಲ್ಲಿ ರೆಂಜಿತ್ ಮಹೇಶ್ವರಿ 3ನೆ ಯತ್ನದಲ್ಲಿ 15.99 ಮೀ. ದೂರ ಜಿಗಿದು ಫೈನಲ್‌ಗೆ ತಲುಪಲು ವಿಫಲರಾದರು.
ಸೋಮವಾರ ಆರಂಭವಾದ ಕುಸ್ತಿ ಸ್ಪರ್ಧೆಯಲ್ಲಿ ಗ್ರಿಕೊ-ರೊಮನ್ 85 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ರವೀಂದ್ರ ಖತ್ರಿ ಅಂತಿಮ-16 ಸುತ್ತಿನಲ್ಲಿ ಹಂಗೇರಿಯದ ವಿಕ್ಟರ್ ಲೊರಿಂಝ್ ವಿರುದ್ಧ 9-0 ಅಂಕಗಳ ಅಂತರದಿಂದ ಹೀನಾಯವಾಗಿ ಸೋತರು.
ಮಹಿಳೆಯರ 200 ಮೀ. ಓಟದಲ್ಲಿ ಸ್ರಬಾನಿ ನಂದಾ ಫೈನಲ್‌ಗೆ ತಲುಪಲು ವಿಫಲರಾಗಿದ್ದಾರೆ. ಹೀಟ್-5ರಲ್ಲಿ 23.58 ನಿಮಿಷದಲ್ಲಿ ಗುರಿ ತಲುಪಿದ ನಂದಾ 6ನೆ ಸ್ಥಾನ ಪಡೆದರು.







