ಕೊಡಗನ್ನು ಪೋಡಿ ಮುಕ್ತಗೊಳಿಸುವ ಗುರಿ: ಸಚಿವ ಸೀತಾರಾಮ್ ಭರವಸೆ
ಸ್ವಾತಂತ್ರ್ಯೋತ್ಸವ ಸಮಾರಂಭ

ಮಡಿಕೇರಿ ಆ.15: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ ಹೊಸ ಯೋಜನೆಯಾದ ಪೋಡಿ ಮುಕ್ತ ಗ್ರಾಮ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಯ 56 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಯೋಜನೆಯನ್ನು ಎಲ್ಲಾ ಗ್ರಾಮಗಳಿಗೆ ವಿಸ್ತರಿಸಿ, ಜಿಲ್ಲೆಯನ್ನು ಪೋಡಿ ಮುಕ್ತವನ್ನಾಗಿಸುವ ಗುರಿ ಹೊಂದಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ತಿಳಿಸಿದ್ದಾರೆ.
ನಗರದ ಕೋಟೆ ಆವರಣದಲ್ಲಿ ನಡೆದ 70 ನೆ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪ್ರತೀ ತಾಲೂಕಿನ 5 ಗ್ರಾಮಗಳಂತೆ ಒಟ್ಟು 15 ಗ್ರಾಮಗಳ ಸರ್ವೇ ಕಾರ್ಯವು ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ವಿಸ್ತರಿಸಲಾಗುವುದೆಂದರು
ಕೊಡಗು ಜಿಲ್ಲೆಯ 56 ಗ್ರಾಮಗಳಲ್ಲಿನ ಎಲ್ಲ ಬಹುಮಾಲಕತ್ವದ ಪಹಣಿದಾರರ ಜಮೀನುಗಳನ್ನು ಉಚಿತವಾಗಿ ಅಳತೆ ಮಾಡಿ ನಕ್ಷೆ ತಯಾರಿಸಿ, ಪ್ರತ್ಯೇಕ ಪಹಣಿಗಳನ್ನು ನೀಡಲಾಗಿದೆ. ಸದರಿ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೊದಲನೆಯ ಸ್ಥಾನದಲ್ಲಿದ್ದು, ಇಲ್ಲಿಯವರೆಗೆ 4,000 ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋಟಿ ವೃಕ್ಷ ಆಂದೋಲನಕ್ಕೆ ಈಗಾಗಲೇ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಸರಕಾರದಿಂದ ಸಾರ್ವಜನಿಕರಿಗೆ ನೀಡಲಾಗುವ ವಿವಿಧ ಇಲಾಖೆಗಳ ನೂರು ಸೇವೆಗಳನ್ನು ಅತ್ಯಂತ ಸನಿಹದಲ್ಲಿ ನೀಡುವ ಸಲುವಾಗಿ ರಾಜ್ಯದ ಪ್ರತೀ ಗ್ರಾಪಂಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
2016- 17ನೆ ಸಾಲಿನ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ 50 ಕೋಟಿ ರೂ. ನಿಗದಿಪಡಿಸಿದ್ದು, ಇದರಲ್ಲಿ 5 ಕೋಟಿ ರೂ.ವನ್ನು ಕುಶಾಲನಗರ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ನೀಡಲಾಗಿದೆ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಮಡಿಕೇರಿ ನಗರ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಸದ್ಯದಲ್ಲೇ ಚಾಲನೆ ದೊರೆಯಲಿದೆ ಎಂದರು.
ನಂತರ ಮಾತನಾಡಿದ ಸಚಿವ ಸೀತಾರಾಮ್ ರಾಜ್ಯ ಸರಕಾರ ಕೊಡಗು ಜಿಲ್ಲೆಗೆ ನೀಡಿರುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು.
2016-17 ನೆ ಸಾಲಿನಲ್ಲಿ ಕೊಡಗು ಜಿಲ್ಲೆಯ ಕೃಷಿ ಚಟುವಟಿಕೆಗಳಾದ ಬಿತ್ತನೆ ಬೀಜಗಳು, ಸಾವಯವ ಗೊಬ್ಬರಗಳು ಮತ್ತು ಕೃಷಿ ಯಂತ್ರೋಪಕರಣಗಳು, ಸಸ್ಯ ಸಂರಕ್ಷಣ ಔಷಧ ಮುಂತಾದ ಕೃಷಿ ಪರಿಕರಗಳನ್ನು ವಿತರಿಸುವ ಕಾರ್ಯಕ್ರಮಗಳಿಗಾಗಿ 371.66 ಲಕ್ಷ ರೂ. ಅನುದಾನ ನಿಗದಿಪಡಿಸಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 152.92 ಲಕ್ಷ ರೂ. ಅನುದಾನದಲ್ಲಿ ಕೃಷಿ ಹೊಂಡ ಹಾಗೂ ತೊಟ್ಟಿಲು ಗುಂಡಿ ಕಾಮಗಾರಿಗಳನ್ನು ಜಲಾನಯನ ವಿಭಾಗದಿಂದ ಕೈಗೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಒಟ್ಟು 3.25 ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಹಾಗೂ ರಸ್ತೆ ನಿರ್ವಹಣೆ ಕಾರ್ಯಕ್ರಮಕ್ಕೆ 3.67 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಜಿಲ್ಲೆಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆಗಾಗಿ 2016-17ನೆ ಸಾಲಿಗೆ 521.83 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಮಡಿಕೇರಿಯಲ್ಲಿ 36.70 ಕೋಟಿ ರೂ. ಹಾಗೂ ಪೊನ್ನಂಪೇಟೆಯಲ್ಲಿ 9.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನ್ಯಾಯಾಲಯಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.







