ಭಾರತ ಜಗತ್ತಿಗೇ ಶಾಂತಿಯ ಸಂದೇಶವನ್ನು ಸಾರಿದೆ: ಡಾ.ಜಿ.ಪರಮೇಶ್ವರ್
ಜ್ಞಾನಪ್ರಕಾಶ ಭವನದ ಉದ್ಘಾಟನೆ

ಚಿಕ್ಕಮಗಳೂರು, ಆ.15: ಶಾಂತಿಯ ಸಂದೇಶವನ್ನು ಇಡೀ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತಿದ್ದರೆ ಅದು ಪ್ರಜಾಪಿತ ಬ್ರಹ್ಮಕುಮಾರೀಸ್ ಸಮಾಜ ಎಂದು ಗೃಹ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯ ಪಟ್ಟರು.
ನಗರದ ಬಸವನಹಳ್ಳಿ ಬಡಾವಣೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರೀಸ್ ಸಮಾಜದ ವಿಸತ್ತೃತ ಜ್ಞಾನಪ್ರಕಾಶ ಭವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಭಾರತ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದೆ. ಭಗವಾನ್ ಬುದ್ಧ 2 ಸಾವಿರ ವರ್ಷಗಳ ಹಿಂದೆ ಶಾಂತಿಯ ಮಂತ್ರವನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಆಸೆಯೇ ದು:ಖಕ್ಕೆ ಮೂಲ ಎಂದಿದ್ದಾರೆ. ಇಂದು ಆಸೆಯಿಂದ ಅನೇಕ ಅನಾಹುತಗಳು ನಡೆಯುತ್ತಿದ್ದು ಆಸೆಯನ್ನು ಬಿಟ್ಟರೆ ಎಲ್ಲವೂ ಒಳಿತಾಗಿರುತ್ತದೆ. ಇಂದು ಮನುಷ್ಯನಿಗೆ ತನ್ನನ್ನು ತಾನು ನಿಯಂತ್ರಣ ಮಾಡಿಕೊಳ್ಳುವ ಶಕ್ತಿ ಮತ್ತು ಶಾಂತಿ ಆವಶ್ಯಕವಾಗಿದ್ದು ಇದಕ್ಕಾಗಿ ನಮ್ಮನ್ನು ಸಾಧನೆಗೆ ಅರ್ಪಿಸಿಕೊಳ್ಳುವುದು ಸತ್ಯ ಮಾರ್ಗದರ್ಶನ ಮಾಡುವುದು ಒಂದು ಉತ್ತಮ ಕೆಲಸ. ಶಿಕ್ಷಣ ವ್ಯಕ್ತಿಯ ಮತ್ತು ಸಮಾಜದ ಮೇಲೆ ಬಹುದೊಡ್ಡ ಬದಲಾವಣೆಯನ್ನು ತರುವ ಶಕ್ತಿಯಾಗಿದೆ. ಜ್ಞ್ಞಾನ ಅಥವಾ ಶಿಕ್ಷಣ ಪ್ರಶ್ನಿಸುವಂತೆ ಮಾಡುತ್ತದೆ. ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲನಿಲಯವು ತನ್ನ 10 ಸಾವಿರಕ್ಕೂ ಹೆಚ್ಚು ಸೇವಾಕೇಂದ್ರಗಳ ಮೂಲಕ ವಿಶ್ವದಲ್ಲಿ ಮನುಷ್ಯನಿಗೆ ಉತ್ತಮ ಶಾಂತಿಯ ಶಿಕ್ಷಣವನ್ನು, ನೆಮ್ಮದಿಯ ಮಾರ್ಗವನ್ನು ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರ್ವಾಹಕ ಕಾರ್ಯದರ್ಶಿ ಮೃತ್ಯುಂಜಯಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಲ್. ವಿಜಯಕುಮಾರ್, ಕಾಂಗ್ರೆಸ್ ವಕ್ತಾರ ಎ.ಎನ್. ಮಹೇಶ್, ದಲಿತ ಸಂಘಟನೆಯ ಮುಖಂಡ ಕೆ.ಟಿ.ರಾಧಕೃಷ್ಣ, ಹರೀಶ್, ಕಾಫಿ ಬೆಳೆಗಾರರಾದ ಸಿ.ವಿ. ತಿಮ್ಮಯ್ಯ ನಗರಸಭಾ ಸದಸ್ಯ ರವೀಂದ್ರ ಪ್ರಭು ಭಾಗವಹಿಸಿದ್ದರು.





