,ಅಸಮಾನತೆಯಿಂದ ಸ್ವಾತಂತ್ರ ಬೇಕಿದೆ’
ಸ್ವಾತಂತ್ರ್ಯೋತ್ಸವ

ತರೀಕೆರೆ, ಆ.15: ಬಡತನ, ಅನಕ್ಷರತೆ, ಅಸಮಾನತೆಯಿಂದ ಮುಕ್ತಿಯಾಗುವುದೇ ನಿಜವಾದ ಸ್ವಾತಂತ್ರ್ಯ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದಾರೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ನುಡಿದರು.
ಅವರು ಪಟ್ಟಣದ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ 70ನೆ ಸ್ವಾತಂತ್ರ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳಾ ಕಲ್ಯಾಣ, ಸರ್ವೋದಯಕ್ಕಾಗಿ ಹಾಗೂ ಅಸಮಾನತೆಯನ್ನು ತೊಡೆದು ಹಾಕಲು ಎಲ್ಲರೂ ಶ್ರಮಿಸಬೇಕು. ದೇಶ ವಿರೋಧಿ ಚಟುವಟಿಕೆ ನಡೆಸುವವರಿಗೆ ಶಿಕ್ಷೆಯಾಗಬೇಕು ಎಂದರು.
ತಾಲೂಕಿನಲ್ಲಿ 30,975 ಶೌಚಾಲಯ ರಹಿತ ಕುಟುಂಬಗಳಿದ್ದು, ಬಯಲನ್ನೇ ಶೌಚಕ್ಕೆ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಪ್ರತಿಯೊಬ್ಬರೂ ಶೌಚಾಲಯ ಹೊಂದಬೇಕು. ಬಯಲು ಮುಕ್ತ ಶೌಚಾಲಯ ತಾಲೂಕನ್ನಾಗಿ ಮಾರ್ಪಡಿಸಲು ಎಲ್ಲರೂ ಸಹಕರಿಸಬೇಕು ಎಂದರು.
ತಾಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದೆ. ಸುಮಾರು 35 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ. 52 ಅಂಬೇಡ್ಕರ್ ಭವನಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಬಿ.ಬಿ. ಸರೋಜ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದವರು ಪಥ ಸಂಚಲನ ನಡೆಸಿದರು. ವಿವಿಧ ಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಟ್ಟರು. ವಿವಿಧ ಕ್ಷೇತ್ರದ ಸಾಧಕರಿಗೆ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಕೃಷ್ಣಮೂರ್ತಿ, ಪುರಸಭಾಧ್ಯಕ್ಷ ಟಿ.ಈ. ಈರಣ್ಣ, ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ಜ್ಯೋತಿ, ತಹಶೀಲ್ದಾರ್ ತನುಜಾ, ತಾಪಂ ಇಒ ಗಂಗಾಧರಮೂರ್ತಿ, ಮುಖ್ಯಾಧಿಕಾರಿ ಗಿರೀಶ್ ಸೇರಿದಂತೆ ಇಲಾಖಾಧಿಕಾರಿಗಳು ಮತ್ತಿತರರು ಉಪಸ್ಥಿತರರು.







