ಮುಂದಿನ ಒಲಿಂಪಿಕ್ಸ್‌ನಲ್ಲಿ ಆಡುತ್ತೇನೊ ಗೊತ್ತಿಲ್ಲ: ಸಾನಿಯಾ

ರಿಯೋ ಡಿ ಜನೈರೊ, ಆ.15: ‘‘ರಿಯೋ ಗೇಮ್ಸ್ ನನ್ನ ಪಾಲಿನ ಕೊನೆಯ ಒಲಿಂಪಿಕ್ಸ್ ಆಗಿದೆ. ಒಲಿಂಪಿಕ್ಸ್ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಹಬ್ಬ. ನಾನು ಇನ್ನೂ ನಾಲ್ಕು ವರ್ಷಗಳ ಕಾಲ ಆಡುತ್ತೇನೆಯೇ ಎಂದು ಗೊತ್ತಿಲ್ಲ’’ ಎಂದು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಹೇಳಿದ್ದಾರೆ.
ರೋಹನ್ ಬೋಪಣ್ಣರೊಂದಿಗೆ ಮಿಶ್ರ ಡಬಲ್ಸ್ ಪಂದ್ಯವನ್ನು ಆಡಿದ್ದ ಸಾನಿಯಾ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದರು. ಕಂಚಿನ ಪದಕಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯದಲ್ಲೂ ಸೋತ ಕಾರಣ ರಿಯೋ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವ ಅವಕಾಶ ಕೈತಪ್ಪಿಹೋಗಿತ್ತು.
‘‘ನಾವು ಶ್ರೇಷ್ಠ ಟೆನಿಸ್ ಆಡಲು ವಿಫಲವಾದೆವು. ಆದರೆ, ಅದೊಂದು ಕ್ರೀಡೆ. ಈ ಸೋಲಿನ ಆಘಾತದಿಂದ ಹೊರ ಬರಲು ಸ್ವಲ್ಪ ಸಮಯ ಬೇಕು. ನಮಗೆ ಕೆಲವು ಅವಕಾಶ ಲಭಿಸಿದ್ದವು. ಎರಡನೆ ಸೆಟ್‌ನಲ್ಲಿ ಹಲವು ಬಾರಿ ಮುನ್ನಡೆ ಸಾಧಿಸಿದ್ದೆವು’’ ಎಂದು ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಕಳೆದುಕೊಂಡ ಬೇಸರದಲ್ಲಿದ್ದ ಸಾನಿಯಾ ಹೇಳಿದ್ದಾರೆ.
ರಿಯೋ ಗೇಮ್ಸ್‌ನಲ್ಲಿ ಭಾರತ ಟೆನಿಸ್ ವಿಭಾಗದಲ್ಲಿ ಶೂನ್ಯ ಸಂಪಾದನೆ ಮಾಡಿದೆ. 7ನೆ ಒಲಿಂಪಿಕ್ ಗೇಮ್ಸ್ ಆಡಿದ್ದ ಲಿಯಾಂಡರ್ ಪೇಸ್ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಮೊದಲ ಸುತ್ತಿನಲ್ಲಿ ಸೋತು ಹೊರ ನಡೆದಿದ್ದರು. ಪ್ರಾರ್ಥನಾರೊಂದಿಗೆ ಮಹಿಳೆಯರ ಡಬಲ್ಸ್ ಆಡಿದ್ದ ಸಾನಿಯಾ ಕೂಡ ಮೊದಲ ಸುತ್ತಿನಲ್ಲಿ ತನ್ನ ಹೋರಾಟ ಕೊನೆಗೊಳಿಸಿದ್ದರು.







