ಜರ್ಮನಿ ಫುಟ್ಬಾಲ್ ಆಟಗಾರ ಲೂಕಾಸ್ ಪೊಡೊಲ್‌ಸ್ಕಿ ನಿವೃತ್ತಿ

ಬರ್ಲಿನ್, ಆ.15: ಜರ್ಮನಿಯ ವಿಶ್ವಕಪ್ ವಿಜೇತ ತಂಡದ ಸದಸ್ಯ ಲೂಕಾಸ್ ಪೊಡೊಲ್‌ಸ್ಕಿ ಸೋಮವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತನ್ನ 12 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಜರ್ಮನಿಯ ಪರ 129 ಪಂದ್ಯಗಳನ್ನು ಆಡಿರುವ ಪೊಡೊಲ್‌ಸ್ಕಿ ಒಟ್ಟು 48 ಗೋಲುಗಳನ್ನು ಬಾರಿಸಿದ್ದಾರೆ. ಲಾಥರ್ ಮಥಾಯಿಸ್ ಹಾಗೂ ಮಿರೊಸ್ಲೊವ್ ಕ್ಲೋಸ್ ಬಳಿಕ ಜರ್ಮನಿಯ ಪರ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ಮೂರನೆ ಆಟಗಾರನಾಗಿದ್ದಾರೆ.
‘‘ಪ್ರತಿಯೊಂದಕ್ಕೂ ಸಮಯ ಎನ್ನುವುದಿದೆ. ಜರ್ಮನಿ ಫುಟ್ಬಾಲ್ ಫೆಡರೇಶನ್(ಡಿಎಫ್‌ಬಿ)ನೊಂದಿಗೆ ನನ್ನ ಸಮಯ ಇಲ್ಲಿಗೆ ಮುಗಿದಿದೆ. ಪೊಲೆಂಡ್‌ನಿಂದ ಎರಡು ವರ್ಷ ಬಾಲಕನಿದ್ದಾಗ ಜರ್ಮನಿಗೆ ಫುಟ್ಬಾಲ್ ಚೆಂಡು ಹಿಡಿದು ಬಂದಿದ್ದ ತಾನೀಗ ವಿಶ್ವ ಚಾಂಪಿಯನ್ ತಂಡದ ಸದಸ್ಯನಾಗಿದ್ದೇನೆ’’ ಎಂದು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೊಡೊಲ್‌ಸ್ಕಿ ತಿಳಿಸಿದ್ದಾರೆ.
31ರ ಹರೆಯದ ಪೊಡೊಲ್‌ಸ್ಕಿ ತನ್ನ ನಿವೃತ್ತಿಯ ನಿರ್ಧಾರದ ಬಗ್ಗೆ ಕೋಚ್ ಜೋಕಿಮ್ ಲಾಗೆ ಮೊದಲು ಮಾಹಿತಿ ನೀಡಿದ್ದರು.
2014ರ ವಿಶ್ವಕಪ್‌ನಲ್ಲಿ ಜರ್ಮನಿ ತಂಡ ಅರ್ಜೆಂಟೀನವನ್ನು ಮಣಿಸಿ ಪ್ರಶಸ್ತಿ ಎತ್ತಿಹಿಡಿದಾಗ ಪೊಡೊಲ್‌ಸ್ಕಿ ತಂಡದಲ್ಲಿದ್ದರೂ ಒಂದೂ ಪಂದ್ಯವನ್ನು ಆಡುವ ಅವಕಾಶ ಪಡೆದಿರಲಿಲ್ಲ. ಪೊಡೊಲ್‌ಸ್ಕಿ 2004ರಲ್ಲಿ ಜರ್ಮನಿ ಪರ ಚೊಚ್ಚಲ ಪಂದ್ಯ ಆಡಿದ್ದರು. 2006ರಲ್ಲಿ ತವರುನೆಲದಲ್ಲಿ ನಡೆದ ವಿಶ್ವಕಪ್‌ನಲ್ಲಿ ಶ್ರೇಷ್ಠ ಯುವ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಫ್ಯಾಕ್ಟ್‌ಫೈಲ್
ಪೂರ್ಣ ಹೆಸರು: ಲೂಕಾಸ್ ಜೋಸೆಫ್ ಪೊಡೊಲ್‌ಸ್ಕಿ
ಹುಟ್ಟಿದ ದಿನ: ಜೂನ್ 4, 1985(31)
ಜನ್ಮಸ್ಥಳ: ಪೊಲೆಂಡ್
ಸ್ಥಾನ: ಫಾರ್ವರ್ಡ್
ವೃತ್ತಿಬದುಕು
2006-09: ಬೇಯರ್ನ್ ಮ್ಯೂನಿಚ್(71 ಪಂದ್ಯ)
2001-02: ಜರ್ಮನಿಯ ಅಂಡರ್-17(6 ಪಂದ್ಯ)
2002-03: ಜರ್ಮನಿಯ ಅಂಡರ್-18(7 ಪಂದ್ಯ)
2003: ಜರ್ಮನಿಯ ಅಂಡರ್-19(3 ಪಂದ್ಯ)
2004: ಜರ್ಮನಿಯ ಅಂಡರ್-21(5 ಪಂದ್ಯ)
2004-2016: ಜರ್ಮನಿ(129 ಪಂದ್ಯ)







