ಸ್ವಾತಂತ್ರ ಯೋಧರ ಕುಟುಂಬಗಳಿಗೆ ಸೌಲಭ್ಯ ಹೆಚ್ಚಳ
ಹೊಸದಿಲ್ಲಿ, ಆ.15: ಸ್ವಾತಂತ್ರ ಯೋಧರ ಪಿಂಚಣಿಯನ್ನು ಶೇ.20ರಷ್ಟು ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದರ ಜೊತೆಗೆ ಸ್ವಾತಂತ್ರ ಹೋರಾಟದಲ್ಲಿ ಗಣನೀಯ ಕೊಡುಗೆ ನೀಡಿದ ಬುಡಕಟ್ಟು ಸಮುದಾಯದ ಮುಖಂಡರ ಪಾತ್ರವನ್ನು ವೈಭವೀಕರಿಸುವ ಸಲುವಾಗಿ ಇಂಥ ಪರಿಚಿತವಲ್ಲದ ಮುಖಂಡರ ಗೌರವಾರ್ಥ ಸ್ಮಾರಕಗಳನ್ನು ಹಲವು ರಾಜ್ಯಗಳಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಕಟಿಸಿದ್ದಾರೆ.
ಇದರ ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿವರೆಗೆ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಸರಕಾರದ ವತಿಯಿಂದ ಭರಿಸುವುದಾಗಿಯೂ ಘೋಷಿಸಿದ್ದಾರೆ.
ಕೆಂಪು ಕೋಟೆಯಲ್ಲಿ 70ನೆ ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ ಹೋರಾಟ ಗಾರರಿಗೆ ನೀಡುತ್ತಿದ್ದ ಪಿಂಚಣಿಯನ್ನು ಶೇ.20ರಷ್ಟು ಹೆಚ್ಚಿಸಲಾಗಿದ್ದು, 25 ಸಾವಿರ ರೂಪಾಯಿ ಪಿಂಚಣಿ ಪಡೆಯುವ ಸ್ವಾತಂತ್ರ ಯೋಧರು ಇನ್ನು ಮುಂದೆ 30 ಸಾವಿರ ರೂಪಾಯಿ ಪಡೆಯಲಿದ್ದಾರೆ. ಇದು ಅವರಿಗೆ ನಾನು ಸಲ್ಲಿಸುವ ಸಣ್ಣ ಕೃತಜ್ಞತೆ ಎಂದು ಬಣ್ಣಿಸಿದರು.
ಕೆಲ ನಾಯಕರು ಸ್ವಾತಂತ್ರ ಹೋರಾಟದಲ್ಲಿ ನಿರ್ವಹಿಸಿದ ಪಾತ್ರದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಚರ್ಚೆಯಾಗುತ್ತಿದೆ. ಆದರೆ ಬುಡಕಟ್ಟು ಸಮುದಾಯದವರ ಕೊಡುಗೆಗಳನ್ನು ಮಾತ್ರ ಅಷ್ಟೊಂದು ಬಿಂಬಿಸಿಲ್ಲ ಎಂದು ಅಭಿಪ್ರಾಯಪಟ್ಟರು. ಇಂಥ ಮುಖಂಡರ ಬಗ್ಗೆ ಭವಿಷ್ಯದ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಹಲವು ಕಡೆಗಳಲ್ಲಿ ಇಂಥ ಯೋಧರ ಸ್ಮಾರಕಗಳನ್ನು ನಿರ್ಮಿಸಲಾಗುವುದು ಎಂದು ವಿವರಿಸಿದರು.
ಬಡಕುಟುಂಬಗಳು ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು ಬವಣೆ ಪಡುತ್ತಿರುವುದನ್ನು ಉಲ್ಲೇಖಿಸಿದ ಮೋದಿ, ಬಡಜನರಿಗೆ ಅಗತ್ಯವಾಗಿ ಆರೋಗ್ಯ ಸೌಲಭ್ಯ ಸಿಗಬೇಕು ಎಂಬ ಸಲುವಾಗಿ ಇಂಥ ಕುಟುಂಬಗಳಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿವರೆಗಿನ ವೈದ್ಯಕೀಯ ವೆಚ್ಚ ಭರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಹಿಂದಿನ ಯುಪಿಎ ಸರಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, ಜನರ ನಿರೀಕ್ಷೆಗಳನ್ನು ಈಡೇರಿಸುವ ಬದಲಾಗಿ ಹಲವು ಹಗರಣಗಳ ಮೂಲಕವೇ ಆಡಳಿತ ನಡೆಸಿತು ಎಂದು ಚುಚ್ಚಿದರು. ಕೇವಲ ಯೋಜನೆಗಳ ಘೋಷಣೆ ಅಥವಾ ಅನುದಾನದಿಂದ ಜನ ತೃಪ್ತರಾಗುವುದಿಲ್ಲ. ವಾಸ್ತವವಾಗಿ ಯೋಜನೆಗಳ ಸೌಲಭ್ಯ ಅವರಿಗೆ ಸಿಗುವಂತಾಗಬೇಕು ಎಂದು ಹೇಳಿದರು.
ನಮ್ಮ ಸರಕಾರದ ಆಡಳಿತಾವಧಿಯಲ್ಲಿ ದಕ್ಷತೆ ಹೆಚ್ಚಿದೆ ಎಂದು ಹೇಳಿದ ಮೋದಿ, ಪಾಸ್‌ಪೋರ್ಟ್ ನೀಡಲು ಹಿಂದೆ ನಾಲ್ಕರಿಂದ ಆರು ತಿಂಗಳ ಕಾಲಾವಧಿ ತಗಲುತ್ತಿತ್ತು. ಇದೀಗ ಕೆಲವೇ ವಾರಗಳಲ್ಲಿ ನೀಡಲಾಗುತ್ತಿದೆ. 2015-16ರಲ್ಲಿ 1.75 ಕೋಟಿ ಪಾಸ್‌ಪೋರ್ಟ್ ಗಳನ್ನು ವಿತರಿಸಲಾಗಿದೆ ಎಂದು ಹೇಳಿಕೊಂಡರು.
ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡಿಕೆಯಲ್ಲೂ ಗಣನೀಯ ಸುಧಾರಣೆಯಾಗಿದ್ದು, ಈ ಮುನ್ನ ಎಐಐಎಂಎಸ್‌ನಂಥ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದರೆ ಹಲವು ದಿನಗಳ ಕಾಲ ರೋಗಿಗಳು ಕಾಯಬೇಕಿತ್ತು. ಆದರೆ ಇದೀಗ ಆನ್‌ಲೈನ್ ರಿಜಿಸ್ಟ್ರೇಷನ್ ಆರಂಭಿಸಲಾಗಿದ್ದು, 40ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಸಿಗುತ್ತದೆ ಎಂದು ವಿವರ ನೀಡಿದರು.
ರೈಲ್ವೆ ಇಲಾಖೆಯ ಕ್ಷಮತೆ ಹೆಚ್ಚಿರುವುದನ್ನೂ ಉಲ್ಲೇಖಿಸಿದ ಅವರು, ಹಿಂದೆ ಒಂದು ನಿಮಿಷಕ್ಕೆ 2,000 ಟಿಕೆಟ್ ನೀಡಲಾಗುತ್ತಿತ್ತು. ಈ ಪ್ರಮಾಣ ಈಗ 15 ಸಾವಿರಕ್ಕೆ ಹೆಚ್ಚಿದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ರಸ್ತೆ ಸೌಲಭ್ಯವನ್ನು ಜನ ಬಯಸುತ್ತಾರೆ. ಇದನ್ನು ಈಡೇರಿಸುವ ಸಲುವಾಗಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಯೋಜನೆ ಆರಂಭಿಸಲಾಗಿದೆ. ಈ ಹಿಂದೆ ದಿನಕ್ಕೆ 75 ಕಿಲೋಮೀಟರ್ ರಸ್ತೆ ನಿರ್ಮಿಸಲಾಗುತ್ತಿತ್ತು. ಆದರೆ ಇದೀಗ ದಿನಕ್ಕೆ 100 ಕಿಲೋಮೀಟರ್‌ಗಿಂತಲೂ ಹೆಚ್ಚು ರಸ್ತೆ ನಿರ್ಮಾಣವಾಗುತ್ತಿದೆ ಎಂದು ಸಾಧನೆ ತೆರೆದಿಟ್ಟರು.
ಮಧ್ಯಮವರ್ಗದವರು ಬಹುಶಃ ಪೊಲೀಸರಿಗಿಂತ ಹೆಚ್ಚು ತೆರಿಗೆ ಅಧಿಕಾರಿಗಳಿಗೆ ಹೆದರುತ್ತಾರೆ. ಈ ಪರಿಸ್ಥಿತಿಯನ್ನು ನಮ್ಮ ಸರಕಾರ ಬದಲಿಸಲಿದೆ. ಒಂದು ಸಮಯದಲ್ಲಿ ಅನನುಕೂಲವನ್ನು ತಡೆಯುವ ಸಲುವಾಗಿ ಹೆಚ್ಚು ತೆರಿಗೆ ನೀಡಲು ಕೂಡಾ ಸಿದ್ಧರಿದ್ದರು. ಮರುಪಾವತಿ ಪಡೆಯುವ ಸೌಲಭ್ಯ ಕೂಡಾ ಗೊಂದಲಮಯವಾಗಿತ್ತು. ಇದೀಗ ಆನ್‌ಲೈನ್ ಮೂಲಕ ರಿಟರ್ನ್ಸ್ ಸಲ್ಲಿಸಿ, ಒಂದು ಅಥವಾ ಎರಡು ವಾರದಲ್ಲಿ ವಾಪಸು ಪಡೆಯಬಹುದಾಗಿದೆ ಎಂದರು.
ಗ್ರೂಪ್ ಸಿ ಮತ್ತು ಡಿ ಉದ್ಯೋಗದ ಸಂದರ್ಶನವನ್ನು ಯಾವುದೇ ಲಂಚಕ್ಕೆ ಅವಕಾಶವಾಗದಂತೆ ನಡೆಸಲು ಅಗತ್ಯ ಕ್ರಮಗಳನ್ನು ಸರಕಾರ ಕೈಗೊಂಡಿದೆ. ವಿವಿಧ ವರ್ಗಗಳಿಗೆ ಸ್ಕಾಲರ್‌ಶಿಪ್ ನೀಡುವ ವಿಧಾನದಲ್ಲೂ ಪಾರದರ್ಶಕ ನೀತಿ ಜಾರಿಗೊಳಿಸಲಾಗಿದೆ. ಪ್ರತಿಯೊಂದನ್ನೂ ಆನ್‌ಲೈನ್ ಮಾಡುವ ಮೂಲಕ ಅರ್ಹರು ಸವಲತ್ತುಗಳನ್ನು ಪಡೆಯುವಂತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದರ ಉದ್ದೇಶ ಸ್ವಚ್ಛ ಹಾಗೂ ನೀತಿಗಳು ಸ್ಪಷ್ಟ. ಕಟ್ಟಕಡೆಯ ವ್ಯಕ್ತಿಗಳಿಗೂ ಸೌಲಭ್ಯಗಳು ಸಿಗುವಂತಾಗಬೇಕು ಎನ್ನುವುದು ನಮ್ಮ ನೀತಿ. ಸಾಂಕೇತಿಕತೆ ಬದಲು ನಿಖರವಾಗಿ ಸೌಲಭ್ಯ ತಲುಪಿಸುವುದು ನಮ್ಮ ಧ್ಯೇಯ. ಇದಕ್ಕಾಗಿ ಸಮಗ್ರ ದೃಷ್ಟಿಕೋನ ಅಭಿವೃದ್ಧಿಪಡಿಸಲಾಗಿದ್ದು, ಸಬಲೀಕರಣಕ್ಕೆ ಒತ್ತು ನೀಡಲಾಗುತ್ತಿದೆ. ಹಿಂದಿನ ಸರಕಾರಗಳ ಯೋಜನೆಗಳನ್ನು ಪೂರ್ಣಗೊಳಿಸಲು ಸರಕಾರ ಬದ್ಧವಾಗಿದೆ ಎಂದರು. ಹಿಂದಿನ ಸರಕಾರಗಳು ಪೂರ್ಣಗೊಳಿಸಲಾಗದ ಯೋಜನೆಗಳನ್ನು ಈ ಸರಕಾರ ಪೂರ್ಣಗೊಳಿಸಿದೆ ಎಂದು ಹೇಳಿದರು.





