ಎಲ್‌ಟಿಟಿಇಯ ಮಾಜಿ ಉಪ ನಾಯಕ ‘ರಾ’ದ ಏಜೆಂಟ್
ನೀನಾ ಗೋಪಾಲ್
ಹೊಸದಿಲ್ಲಿ, ಆ.15: ಎಲ್‌ಟಿಟಿಇಯ ಅತ್ಯುನ್ನತ ನಾಯಕ ವೇಲುಪಿಳ್ಳೆ ಪ್ರಭಾಕರನ್‌ಗೆ ಸಹಾಯಕನಾಗಿದ್ದ ಹಾಗೂ ಒಂದು ಕಾಲದಲ್ಲಿ ಸಂಘಟನೆಯ ಉಪನಾಯಕನಾಗಿದ್ದವನೊಬ್ಬ ‘ರಾ’ದ ಏಜೆಂಟ್ ಆಗಿದ್ದನು. ಆತನನ್ನು 1989ರಷ್ಟು ಮೊದಲೇ ನೇಮಿಸಿಕೊಳ್ಳಲಾಗಿತ್ತೆಂದು ಹೊಸ ಪುಸ್ತಕವೊಂದು ಹೇಳಿದೆ.
ಗೋಪಾಲ ಸ್ವಾಮಿ ಮಹೇಂದ್ರ ರಾಜನ್ ಅಲಿಯಾಸ್ ಮಹತ್ತಾಯ ಎಂಬ ಆ ವ್ಯಕ್ತಿ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಗೂಢಚಾರನಾಗಿದ್ದನೆಂದು 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಗುವ ಸ್ವಲ್ಪವೇ ಮೊದಲು ಅವರ ಸಂದರ್ಶನ ನಡೆಸಿದ್ದ ಪತ್ರಕರ್ತೆ ನೀನಾ ಗೋಪಾಲ್ ತಿಳಿಸಿದ್ದಾರೆ.
1989ರಷ್ಟು ಮೊದಲೇ ಆ ವ್ಯಕ್ತಿಯನ್ನು ಪ್ರಭಾಕರನ್‌ನ ನುಸುಳಲು ಅಸಾಧ್ಯವಾಗಿದ್ದ ಸಂಘಟನೆಯಲ್ಲಿ ತನ್ನ ಗೂಢಚರನನ್ನಾಗಿ ‘ರಾ’ ಬೆಳೆಸಿತ್ತು ಹಾಗೂ ನೇಮಿಸಿತ್ತೆಂದು ಅವರು ತನ್ನ ‘ದಿ ಅಸಾಸಿನೇಶನ್ ಆಫ್ ರಾಜೀವ್ ಗಾಂಧಿ (ಪೆಂಗ್ವಿನ್)’ ಪ್ರಸ್ತಕದಲ್ಲಿ ಹೇಳಿದ್ದಾರೆ.
ಬಂಡುಕೋರ ಚಳವಳಿಯನ್ನು ಒಳಗಿನಿಂದಲೇ ಬುಡ ಮೇಲುಗೊಳಿಸಿ, ಪ್ರಭಾಕರನ್‌ನನ್ನು ಕೊಂದು, ಎಲ್‌ಟಿಟಿಇಯ ನಿಯಂತ್ರಣವನ್ನು ಕೈಗೆ ಪಡೆದುಕೊಳ್ಳುವ ಕೆಲಸವನ್ನು ಆತನಿಗೆ ವಹಿಸಲಾಗಿತ್ತೆಂದು ನೀನಾ ಬರೆದಿದ್ದಾರೆ.
‘ರಾ’ದೊಂದಿಗೆ ಮಹತ್ತಾಯನ ಸಂಪರ್ಕದ ಬಗ್ಗೆ ಭಾರತದ ಸೇನಾ ಗೂಢಚರ್ಯೆ ಅಥವಾ ಐಬಿಗೆ ತಿಳಿದಿರಲಿಲ್ಲ. ಆತನನ್ನು ಭಾರತೀಯ ಗೂಢಚರ್ಯೆ ಏಜೆಂಟ್ ಆಗಿದ್ದನೆಂಬ ಆರೋಪದಲ್ಲಿ ಬಳಿಕ ಎಲ್‌ಟಿಟಿಇ ಹತ್ಯೆ ಮಾಡಿತ್ತೆಂದು ಅವರು ತಿಳಿಸಿದ್ದಾರೆ.
1993ರ ಜನವರಿಯಲ್ಲಿ ತಮಿಳು ವ್ಯಾಘ್ರಗಳ ಹಡಗೊಂದರ ಬಗ್ಗೆ ಭಾರತೀಯರಿಗೆ ಮಾಹಿತಿ ನೀಡಿ, ಪ್ರಭಾಕರನ್‌ನ ಬಾಲ್ಯ ಮಿತ್ರ ಹಾಗೂ ಜಾಫ್ನಾದ ಮಾಜಿ ಎಲ್‌ಟಿಟಿಇ ಕಮಾಂಡರ್ ಕಿಟ್ಟು ಎಂಬಾತನ ಸಾವಿಗೆ ಕಾರಣನಾದವನು ಮಹತ್ತಾಯನೆಂಬ ಶಂಕೆ ಎಲ್‌ಟಿಟಿಇಗೆ ಇತ್ತೆನ್ನಲಾಗಿದೆ.
ಮಹತ್ತಾಯನನ್ನು ಎಲ್‌ಟಿಟಿಇ ಶಿಬಿರಕ್ಕೆ ಒಯ್ದು ಆತ ಮಾತಾಡಲು ಅಥವಾ ಎದ್ದು ನಿಲ್ಲಲು ಅಶಕ್ತನಾಗುವ ವರೆಗೆ ಚಿತ್ರಹಿಂಸೆ ನೀಡಿ, 19 ತಿಂಗಳ ಬಳಿಕ ಕೊಲ್ಲಲಾಯಿತು. ಅವನ ಸುಮಾರು 257 ಮಂದಿ ಅನುಚರರನ್ನೂ ಕೊಂದು ಅವರ ಶವಗಳನ್ನು ಎಲ್‌ಟಿಟಿಇ ಮಾದರಿಯಲ್ಲಿ ಗುಂಡಿಯೊಂದರೊಳಗೆ ಎಸೆದು ಬೆಂಕಿ ಹಚ್ಚಲಾಗಿತ್ತು.





