284 ಮಂದಿ ಸನ್ನಡತೆ ಕೈದಿಗಳಿಗೆ 'ಬಿಡುಗಡೆ ಭಾಗ್ಯ'

ಜೈಲಿನಲ್ಲಿದ್ದ ಪ್ರೇಮಿಗಳಿಗೆ 'ಸ್ವಾತಂತ್ರ'
ಬೆಂಗಳೂರು, ಆ. 15: ಇಡೀ ದೇಶವೇ 70ನೆ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿರುವ ಸುಸಂದರ್ಭದಲ್ಲೇ, 48ಮಂದಿ ಮಹಿಳಾ ಕೈದಿಗಳು ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿದ್ದ 284 ಮಂದಿ ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆಯ ಸ್ವಾತಂತ್ರ ದಕ್ಕಿದೆ.
ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ 120, ಬಳ್ಳಾರಿ ಕಾರಾಗೃಹದಿಂದ 26, ಧಾರವಾಡ-8, ಮೈಸೂರು-52, ಬೆಳಗಾವಿ-35, ವಿಜಯಪುರ-16 ಹಾಗೂ ಕಲಬುರಗಿ ಕಾರಾಗೃಹದಿಂದ 27 ಮಂದಿ ಸೇರಿ ದಂತೆ ಒಟ್ಟು 284 ಮಂದಿ ಜೈಲು ಹಕ್ಕಿಗಳಿಗೆ ಸ್ವಾತಂತ್ರ ಸಿಕ್ಕಂತೆ ಆಗಿದೆ.
14 ವರ್ಷ ಶಿಕ್ಷೆ ಪೂರೈಸಿದ 236 ಮಂದಿ ಪುರುಷರು ಹಾಗೂ ಹತ್ತು ವರ್ಷ ಶಿಕ್ಷೆ ಪೂರೈಸಿದ 48 ಮಂದಿ ಮಹಿಳಾ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ. ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸನ್ನಡತೆ ಕೈದಿಗಳಿಗೆ ಪ್ರಮಾಣ ಪತ್ರ ನೀಡುವ ಮೂಲಕ ಬಿಡುಗಡೆ ಮಾಡಲಾಯಿತು.
ಹೊಸ ಮಾರ್ಗಸೂಚಿಯನ್ವಯ ಒಟ್ಟು 320 ಮಂದಿ ಕೈದಿಗಳನ್ನು ಸನ್ನಡತೆ ಆಧಾರ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದರೆ, ಆ ಪೈಕಿ ಕೊಲೆ, ದರೋಡೆ ಸೇರಿದಂತೆ ಗಂಭೀರ ಸ್ವರೂಪದ ಪ್ರಕರಣಗಳನ್ನು ಎದುರಿಸುತ್ತಿರುವವರನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಆ ಸಂಖ್ಯೆ 284ಕ್ಕೆ ಇಳಿಸಲಾಗಿದೆ.
ಪ್ರೇಮಿಗಳ ಬಿಡುಗಡೆ: ಅನೈತಿಕ ಸಂಬಂಧದ ಹಿನ್ನೆಲೆ ಯಲ್ಲಿ ತನ್ನ ಪ್ರಿಯಕರನ ಜತೆ ಸೇರಿ ಪತಿ ಅಶೋಕ್ ಗುತ್ತೆದಾರ್ ಹತ್ಯೆಗೈದ ಕಲಬುರಗಿ ಜೈಲು ಸೇರಿದ್ದ ಪದ್ಮಾ ವತಿ ಮತ್ತು ಆಕೆಯ ಪ್ರಿಯಕರ ಸುಭಾಶ್‌ಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಹೊಂದಿದ್ದಾರೆ.
ಕಾರಾಗೃಹದಲ್ಲಿದ್ದುಕೊಂಡೆ ಇಬ್ಬರು ಪ್ರೇಮಿಗಳು ಪತ್ರಿಕೋದ್ಯಮ ಪದವಿ ಪಡೆದಿದ್ದು, ಇಬ್ಬರೂ ಬಹಿರಂಗ ವಾಗಿ ಮದುವೆ ಆಗುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸುವ ಇಚ್ಛೆಹೊಂದಿದ್ದಾರೆ. ತಮಗೆ ತಪ್ಪಿನ ಅರಿವಾ ಗಿದ್ದು, ಉತ್ತಮ ಪ್ರಜೆಗಳಾಗಿ ಜೀವನ ನಡೆಸುತ್ತೇವೆ ಎಂದು ಪ್ರೇಮಿಗಳು ಹೇಳಿದ್ದಾರೆ.
ಈ ಮಧ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಶಿಕ್ಷೆಗೆ ಒಳಗಾಗಿ ಬಳ್ಳಾರಿ ಕೇಂದ್ರ ಕಾರಾ ಗೃಹದಲ್ಲಿದ್ದ ತಂದೆ-ಮಗನಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಭಾಗ್ಯ ಲಭಿಸಿದಂತಾಗಿದೆ.
ಹೊಸ ಜೀವನ ನಡೆಸಿ
ಸನ್ನಡತೆ ಆಧಾರದ ಮೇಲೆ ಕಾರಾಗೃಹದಿಂದ ಹೊರ ಬರುತ್ತಿರುವ ಎಲ್ಲ ಕೈದಿಗಳು ಸಮಾಜದ ಮುಖ್ಯ ವಾಹಿನಿಗೆ ಬರಲು ಸಮಸ್ಯೆಗಳನ್ನು ಎದುರಿ ಸಬೇಕಾಗು್ತದೆ. ಆ ಹಿನ್ನೆಲೆಯಲ್ಲಿ ರಾಗ-ದ್ವೇಷ,ಉದ್ವೇಗಕ್ಕೆ ಒಳಗಾಗದೆ ಹೊಸ ಜೀವನ ನಡೆಸ ಬೇಕೆಂದು ಕಲಬುರಗಿ ಜಿಲ್ಲಾ ನ್ಯಾಯಾಲಯದ ನ್ಯಾ.ಬಿ.ವಿ. ಪಾಟೀಲ್ ಸಲಹೆ ಮಾಡಿದ್ದಾರೆ.





