ರಾಕೇಶ್ ಹೆಸರಿನಲ್ಲಿ ಯಕೃತ್ ಕಸಿ ಯೋಜನೆಗೆ ಚಿಂತನೆ: ಸಿದ್ದರಾಮಯ್ಯ
ಬೆಂಗಳೂರು, ಆ.15: ಇತ್ತೀಚೆಗೆ ನಿಧನರಾದ ತಮ್ಮ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಖಾಸಗಿ ಫೌಂಡೇಶನ್ ಅಥವಾ ಸರಕಾರದ ವತಿಯಿಂದ ಯಕೃತ್ ಕಸಿ ಯೋಜನೆಯನ್ನು ಜಾರಿಗೊಳಿಸುವ ಸಂಬಂಧ ಗಂಭೀರ ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ನಗರದ ಮೆಜೆಸ್ಟಿಕ್ ಬಳಿ ಇರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ 2018ನೆ ಜನ್ಮ ದಿನಾಚರಣೆ ಅಂಗವಾಗಿ ಮಾಲಾರ್ಪಣೆ ಮಾಡಿದ ನಂತರ ವಾಟಾಳ್ ನಾಗರಾಜ್ ಅವರ ಮನವಿಗೆ ಪ್ರತಿಕ್ರಿಯೆ ನೀಡಿದರು. ತಮ್ಮ ಪುತ್ರ ರಾಕೇಶ್ ಅವರ ಸಾವಿನ ಸಂದರ್ಭದಲ್ಲಿ ನಾಡಿನ ಜನತೆ ನಮಗೆ ಧೈರ್ಯ ತುಂಬಿದ್ದರು. ನಮ್ಮ ದುಃಖದಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ತುಂಬು ಹೃದಯದ ಕೃತಜ್ಞತೆ ಹೇಳುತ್ತೇನೆ. ವಾಟಾಳ್ ಅವರು ರಾಕೇಶ್ ಹೆಸರಿನಲ್ಲಿ ರಾಜ್ಯ ಸರಕಾರದಿಂದ ಯಕೃತ್ ಕಸಿ ಯೋಜನೆ ಜಾರಿಗೊಳಿಸುವಂತೆ ಸಲಹೆ ನೀಡಿದ್ದಾರೆ. ಸರಕಾರದಿಂದ ಸಾಧ್ಯವಾಗದೇ ಇದ್ದರೆ ರಾಕೇಶ್ ಫೌಂಡೇಶನ್ ಸ್ಥಾಪಿಸಿ ಅದರಿಂದಲಾದರೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ಯಕೃತ್ ಕಸಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅವರ ಸಲಹೆಗಳನ್ನು ಗಂಭೀರವಾಗಿ ಪರಿಶೀಲಿಸಲಾಗುವುದು. ಈ ಯೋಜನೆಯನ್ನು ಯಾವ ಹಂತದಲ್ಲಿ ಜಾರಿಗೊಳಿಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ಈಗಾಗಲೇ ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಲಾಗಿದೆ. ಅದೇ ರೀತಿಯಾಗಿ ರಾಯಣ್ಣ ಅವರ ಹೆಸರನ್ನು ಮೆಟ್ರೊ ನಿಲ್ದಾಣಕ್ಕೂ ನಾಮಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತ ನಾಡಿ, ರಾಕೇಶ್ ಸಿದ್ದರಾಮಯ್ಯ ಅವ ಹೆಸರಿನಲ್ಲಿ ಯಕೃತ್ ಕಸಿ ಯೋಜನೆ ಜಾರಿಗೊಳಿಸಬೇಕು ಹಾಗೂ ಸಂಗೊಳ್ಳಿ ರಾಯಣ್ಣ ಜನ್ಮ ದಿನಾಚರಣೆ ಯನ್ನು ಸರಕಾರದ ವತಿಯಿಂದಲೇ ಆರಿಸಬೇಕು ಎಂದು ಅವರು ಮನವಿ ಪತ್ರ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಯಣ್ಣ ಪ್ರತಿಷ್ಠಾನದ ಕೃಷ್ಣಮೂರ್ತಿ, ಮಾಜಿ ಶಾಸಕ ಕೃಷ್ಣಪ್ಪ, ಮಾಜಿ ಮೇಯರ್ ಹುಚ್ಚಪ್ಪ ಮತ್ತಿತರರು ಉಪಸ್ಥಿತರಿದ್ದರು.





