ಅಮೆರಿಕಕ್ಕೆ ಬರುವವರು ಸೂಕ್ಷ್ಮ ತಪಾಸಣೆಗೆ ಒಳಗಾಗಲೇಬೇಕು: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಆ.16: ಬೇರೆ ರಾಷ್ಟ್ರಗಳಿಂದ ಅಮೆರಿಕಕ್ಕೆ ಬರುವವರು ಸೂಕ್ಷ್ಮ ತಪಾಸಣೆಗೆ ಒಳಗಾಗಲೇ ಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆಂದು ವರದಿಯಾಗಿದೆ. ಕೆಲವು ರಾಜ್ಯಗಳಿಂದ ಬರುವವರನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ಹೇಳಿದ ಟ್ರಂಪ್ ಆ ರಾಷ್ಟ್ರಗಳು ಯಾವ್ಯಾವುವು ಎಂದು ಹೇಳಿಲ್ಲ. ಪಾಶ್ಚಾತ್ಯ ದೇಶಗಳ ಮೌಲ್ಯಗಳನ್ನು ಧಾರ್ಮಿಕ ಸಹಿಷ್ಣುತೆಯನ್ನು ಇತರ ದೇಶಗಳಿಂದ ಬರುವವರು ಪಾಲಿಸುತ್ತಿದ್ದಾರೆಯೇ ಎಂದು ಪರಿಶೀಲಿಸಬೇಕಿದೆ ಎಂದು ಟ್ರಂಪ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಇರಾಕ್ ಯುದ್ಧವನ್ನು ಮೊದಲೇ ತಾನು ವಿರೋಧಿಸಿದ್ದೆ. ಇರಾಕ್‌ನ ತೈಲಬಾವಿಗಳು ಐಸಿಸ್ ವಶವಾಗದಂತೆ ಅಮೆರಿಕ ಎಚ್ಚರವಹಿಸಬೇಕು. ಕುಪ್ರಸಿದ್ದ ಗ್ವಾಂಟನಾಮ ಜೈಲನ್ನು ಮುಚ್ಚುವುದಿಲ್ಲ. ಇಸ್ಲಾಮಿಕ್ ಭಯೋತ್ಪಾದಕರ ತನಿಖೆಗಾಗಿ ಪ್ರೆಸಿಡೆನ್ಶಿಯಲ್ ಆಯೋಗವನ್ನು ಸ್ಥಾಪಿಸುವೆ ಎಂದೂ ಟ್ರಂಪ್ ಹೇಳಿದ್ದಾರೆ. ಜೊತೆಗೆ,ತನ್ನ ಪ್ರತಿಸ್ಪರ್ಧಿ ಡೆಮಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರಿಗೆ ಐಸಿಸ್‌ನ್ನು ಎದುರಿಸುವ ಶಕ್ತಿ ಇಲ್ಲ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.





