ಫಿನಿಶ್ ಲೈನ್‌ಗೆ ಹಾರಿ ಚಿನ್ನ ಕಿತ್ತುಕೊಂಡ ಮಹಿಳಾ ಅಥ್ಲೀಟ್ ಮಿಲ್ಲರ್ ..!

ರಿಯೋ ಡಿ ಜನೈರೊ, ಆ.16: ಬಹಮಾಸ್ ನ ಮಹಿಳಾ ಅಥ್ಲೀಟ್ ಶಾನೆ ಮಿಲ್ಲರ್ ಗುರಿ ತಲುಪಲು ಇನ್ನೂ ಕೆಲವೆ ಸೆಕೆಂಡ್‌ಗಳು ಬಾಕಿ ಇದ್ದಾಗ ಫಿನಿಶ್ ಲೈನ್‌ಗೆ ಹಾರಿ ಚಿನ್ನ ಜಯಿಸುವ ಮೂಲಕ ಒಲಿಂಪಿಕ್ಸ್‌ನಲ್ಲಿ ಐದನೆ ಚಿನ್ನದ ನಿರೀಕ್ಷೆಯಲ್ಲಿದ್ದ ಅಮೆರಿಕದ ವರ್ಲ್ಡ್ ಚಾಂಪಿಯನ್ ಅಲೈಸನ್ ಫೆಲಿಕ್ಸ್‌ಗೆ ಶಾಕ್ ನೀಡಿದ್ದಾರೆ.
ಅಮೆರಿಕದ ಫೆಲಿಕ್ಸ್ ಗೆ ಐದನೆ ಚಿನ್ನ ಬಹುತೇಕ ಖಚಿತವಾಗಿತ್ತು. ಆದರೆ ಒಲಿಂಪಿಕ್ಸ್ ನ ಮಹಿಳೆಯರ 400 ಮೀಟರ್ ಓಟದಲ್ಲಿ ಕೊನೆಯ ಕ್ಷಣದಲ್ಲಿ ಅವರು ಫಿನಿಶ್ ಲೈನ್‌ನ್ನು ಮುಟ್ಟುವ ಹಂತದಲ್ಲಿದ್ದಾಗ ಬಹಮಾಸ್‌ನ ಮಿಲ್ಲರ್ ಫಿನಿಶ್ ಲೈನ್ ಗೆ ಹಾರಿದರು. ಮಿಲ್ಲರ‍್ ಪ್ರಯತ್ನ ಯಶಸ್ವಿಯಾಯಿತು. ಅವರು ಒಲಿಂಪಿಕ್ಸ್ ನಲ್ಲಿ ಚೊಚ್ಚಲ ಚಿನ್ನಕ್ಕೆಮುತ್ತಿಟ್ಟರು.
ಫೆಲಿಕ್ಸ್ ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ನಾಲ್ಕು ಚಿನ್ನ ಮತ್ತು ಎರಡು ಬೆಳ್ಳಿ ಜಯಿಸಿದ್ದರು. ಈ ಬಾರಿ 400 ಮೀಟರ‍್ ಓಟದಲ್ಲಿ ಚಿನ್ನ ಜಯಿಸಿ ಪದಕದ ಖಾತೆ ತೆರೆಯುವ ಯೋಜನೆಯಲ್ಲಿದ್ದರು. ಆದರೆ ಅವರು 49.44 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಬೆಳ್ಳಿ ಪಡೆದರು. ಜಮೈಕಾದ ಶೆರಿಕಾ ಜಾಕ್ಸನ್ (49.85 ಸೆ) ಕಂಚು ಗಿಟ್ಟಿಕೊಂಡರು.





