ಸೌದಿ ಅರೇಬಿಯ: ಉತ್ತರಪ್ರದೇಶ ವ್ಯಕ್ತಿ ಸಾವು, ಮೂವರು ಕೇರಳೀಯರ ಸಹಿತ ಐವರ ಬಂಧನ
ಝಕಾಕ, ಆ.16: ಉತ್ತರಪ್ರದೇಶದ ವ್ಯಕ್ತಿಯೊಬ್ಬನ ಸಾವಿಗೆ ಸಂಬಂಧಿಸಿ ಮೂವರು ಕೇರಳೀಯರ ಸಹಿತ ಐವರು ಭಾರತೀಯರನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದಾರೆಂದು ವರದಿಯಾಗಿದೆ. ಝಕಾಕದ ಸೆಂಟ್ರಲ್ ಆಸ್ಪತ್ರೆಯ ದುರಸ್ತಿ ಕೆಲಸ ನಡೆಸುವ ಕಂಪೆನಿಯ ಉದ್ಯೋಗಿಯಾಗಿದ್ದ ಉತ್ತರಪ್ರದೇಶದ ವ್ಯಕ್ತಿ ಐದು ದಿವಸ ಮೊದಲು ವಾಸಸ್ಥಳದ ಕೋಣೆಯಲ್ಲಿ ಅಸಹಜರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತದೇಹದ ಕೊರಳಿಗೆ ಬಟ್ಟೆಯ ಉರುಳು ಹಾಕಲಾಗಿತ್ತು. ಹೊಟ್ಟೆಗೆ ಕತ್ತಿಯಿಂದ ಗಾಯಗೊಳಿಸಲಾಗಿತ್ತು. ಈ ನಿಟ್ಟಿನಲ್ಲಿ ಮೃತ ವ್ಯಕ್ತಿಯ ರೂಮ್ ಮೇಟ್‌ಗಳಾದ ಐವರು ಭಾರತೀಯರನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಮೃತ ವ್ಯಕ್ತಿ ಎರಡು ತಿಂಗಳಿನಿಂದ ಸಂಬಳ ಸಿಗದಿರುವ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೆ ರೂಂನಲ್ಲಿಯೇ ಉಳಿದಿದ್ದರು ಎನ್ನಲಾಗಿದೆ. ಘಟನೆ ನಡೆದ ದಿವಸ ಬೆಳಗ್ಗೆ 7:30ಕ್ಕೆ ಇತರರು ಕೆಲಸಕ್ಕೆ ಹೋಗುವಾಗ ಈ ವ್ಯಕ್ತಿ ಕೋಣೆಯಲ್ಲಿ ಮಲಗಿ ನಿದ್ರಿಸುತ್ತಿದ್ದರು ಎನ್ನಲಾಗಿದೆ. ರೂಮ್‌ಮೇಟ್‌ಗಳು ಕೆಲಸ ಮುಗಿಸಿ ಮರಳಿ ಬಂದಾಗ ಕೋಣೆ ಮುಚ್ಚಿದ ಸ್ಥಿತಿಯಲ್ಲಿತ್ತು. ಅವರು ಬಾಗಿಲು ತೆರೆದು ಒಳಗೆ ಹೋಗಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯ ನಂತರವೇ ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊತ್ತಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.







