ಹೆಚ್ಚಿನ ಐಸಿಸ್ ಉಗ್ರರಿಗೆ ಇಸ್ಲಾಮಿನ ಬಗ್ಗೆ ಗೊತ್ತಿಲ್ಲ
ಸೋರಿಕೆಯಾದ ದಾಖಲೆಗಳಿಂದ ಬಹಿರಂಗ
.jpg)
ಸಿರಿಯ-ಟರ್ಕಿ ಗಡಿಯಲ್ಲಿರುವ ಅಡಗುದಾಣವೊಂದರಲ್ಲಿ ಐಸಿಸ್‌ಗೆ ಹೊಸದಾಗಿ ಸೇರಿದ ಉಗ್ರರನ್ನು ಇಡಲಾಗಿತ್ತು. ನೇಮಕಾತಿ ಮಾಡಿದವರು ಹೊಸ ಉಗ್ರರ ಇಸ್ಲಾಮ್ ಕುರಿತ ಜ್ಞಾನವನ್ನು ತಿಳಿಯುವುದಕ್ಕಾಗಿ ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಇಸ್ಲಾಮ್‌ನ ಬಗ್ಗೆ ಅವರು ತೀರಾ ಅಜ್ಞಾನಿಗಳಾಗಿದ್ದಾರೆ ಎನ್ನುವುದು ಅದರಲ್ಲಿ ಗೊತ್ತಾಯಿತು. ಇದಕ್ಕಿಂತ ಹೆಚ್ಚಿನದನ್ನು ಭಯೋತ್ಪಾದಕ ಗುಂಪು ನಿರೀಕ್ಷಿಸುವುದೂ ಸಾಧ್ಯವಿರಲಿಲ್ಲ.
2013 ಮತ್ತು 2014ರಲ್ಲಿ ಐಸಿಸ್ ಕಾಲಾಳುಗಳ ನೇಮಕಾತಿ ಅಭಿಯಾನ ಉತ್ತುಂಗದಲ್ಲಿರುವಾಗ, ಐಸಿಸ್‌ನ ಅನುಯಾಯಿಗಳಾಗಿದ್ದವರ ವಿವರಗಳು ಇಲ್ಲಿವೆ: ಅದರ ಒಂದು ಗುಂಪು ಫ್ರಾನ್ಸ್‌ನಲ್ಲಿ ತಮ್ಮ ನೇಮಕಾತಿದಾರರೊಂದಿಗೆ ದಿನಕ್ಕೆ ಹಲವಾರು ಬಾರ್‌ಗಳಿಗೆ ಹೋಗಿ ಕುಡಿಯುವ ಫ್ರೆಂಚರದಾಗಿತ್ತು; ಇಸ್ಲಾಮ್‌ಗೆ ಮತಾಂತರಗೊಂಡ ಓರ್ವ ಯುರೋಪಿಯನ್ ಈಗ ತನ್ನನ್ನು ತಾನು ನಾಚಿಕೆಯಿಂದ ಸಲಿಂಗಿ ಎಂದು ಹೇಳುತ್ತಿದ್ದಾನೆ; ಇಬ್ಬರು ಬ್ರಿಟಿಶರು ಸಿರಿಯದಲ್ಲಿ ‘ಜಿಹಾದ್’ಗೆ ತಯಾರಾಗುವುದಕ್ಕಾಗಿ ‘ಅಮೆಝಾನ್’ ಆನ್‌ಲೈನ್ ಅಂಗಡಿಯಿಂದ ಕುರ್‌ಆನ್‌ಗಳನ್ನು ತರಿಸಿಕೊಂಡವರು. ಅವರನ್ನು ಗುಂಪುಗಳಲ್ಲಿ ಸುರಕ್ಷಿತ ಮನೆಗಳಲ್ಲಿ ಇಡಲಾಗಿತ್ತು ಎಂಬುದಾಗಿ ಸುದ್ದಿ ಸಂಸ್ಥೆ ಅಸೋಸಿಯೇಟಡ್ ಪ್ರೆಸ್ ನಡೆಸಿದ ಸಂದರ್ಶನಗಳು ಮತ್ತು ನ್ಯಾಯಾಲಯದ ದಾಖಲೆಗಳು ಹೇಳುತ್ತವೆ.
‘‘ಅವರು ಕೇಳಿದ ಪ್ರಶ್ನೆಗಳನ್ನು ಕೇಳಿ, ಇದು ನನಗೆ ಹೇಳಿಸಿದ ಸ್ಥಳ ಅಲ್ಲವೇನೋ ಎಂದನಿಸಿತು. ‘ನೀನು ಸಾಯುವಾಗ ನಾವು ಯಾರಿಗೆ ತಿಳಿಸಬೇಕು?’’ ಮುಂತಾದ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದರು’’ ಎಂದು 32 ವರ್ಷದ ಮತಾಂತರಗೊಂಡ ಯುರೋಪಿಯನ್ ಹೇಳುತ್ತಾನೆ.
ಅವನು 2014ರಲ್ಲಿ ಸಿರಿಯಕ್ಕೆ ಹೋದನು. ಹೊಸದಾಗಿ ನೇಮಕಗೊಂಡವರಿಗೆ ಐಸಿಸ್‌ನ ಇಸ್ಲಾಮ್ ಕುರಿತ ಪ್ರಚಾರ ವೀಡಿಯೊಗಳನ್ನು ತೋರಿಸಲಾಗುತ್ತಿತ್ತು. ಅಲ್ಲಿಗೆ ಭೇಟಿ ನೀಡುವ ಐಸಿಸ್ ಇಮಾಮ್‌ಗಳು ಹುತಾತ್ಮತೆಯನ್ನು ಪದೇ ಪದೇ ಶ್ಲಾಘಿಸುತ್ತಿದ್ದರು ಎಂದು ಆತನು ಹೇಳುತ್ತಾನೆ. ಹೊಸದಾಗಿ ನೇಮಕಗೊಂಡವರು ಮನೆಯಿಂದ ತುಂಬಾ ದೂರದಲ್ಲಿದ್ದಾರೆ ಹಾಗೂ ಅವರು ಧಾರ್ಮಿಕ ಶಿಕ್ಷಣದ ಕೊರತೆಯನ್ನೂ ಎದುರಿಸುತ್ತಿದ್ದಾರೆ. ಹಾಗಾಗಿ, ಹೆಚ್ಚಿನವರಿಗೆ ಸರಿಯಾದಿ ಯೋಚಿಸುವ ಸಾಮರ್ಥ್ಯವೇ ಇರುವುದಿಲ್ಲ.
ಬಣ್ಣದ ಮಾತುಗಳಿಂದ ಮರುಳು
ಮುರಾದ್ ಫೇರ್ಸ್ ಎಂಬ ವ್ಯಕ್ತಿಯು ನೇಮಿಸಿದ 10 ಫ್ರೆಂಚ್ ಯುವಕರ ಪೈಕಿ ಒಂಬತ್ತು ಮಂದಿಯ ದಾಖಲೆಗಳು ದೊರೆತಿವೆ. ಅವರ ಪೈಕಿ ಕರೀಮ್ ಮುಹಮ್ಮದ್ ಅಗ್ಗಾಡ್ ಎಂಬ ವ್ಯಕ್ತಿ ಫೇರ್ಸ್ ಜೊತೆ ದಿನಕ್ಕೆ ಹಲವು ಬಾರ್‌ಗಳಿಗೆ ಹೋಗುತ್ತಿದ್ದವನಾಗಿದ್ದನು. ತನ್ನನ್ನು ಸೆಳೆಯಲು ತನ್ನ ನೇಮಕಾತಿದಾರರು ‘‘ಬಣ್ಣದ ಮಾತುಗಳನ್ನು’’ ಆಡಿದರು ಎನ್ನುತ್ತಾನೆ.
ಅವನು 2013ರ ಉತ್ತರಾರ್ಧದಲ್ಲಿ ತನ್ನ ತಮ್ಮ ಮತ್ತು ಸ್ನೇಹಿತರೊಂದಿಗೆ ಸಿರಿಯಕ್ಕೆ ಪ್ರಯಾಣಿಸಿದನು. ಅವರ ಪೈಕಿ ಏಳು ಮಂದಿ ಕೆಲವೇ ತಿಂಗಳಲ್ಲಿ ಫ್ರಾನ್ಸ್‌ಗೆ ಮರಳಿದರು. ಅವರನ್ನು ಬಂಧಿಸಲಾಯಿತು. ಸಿರಿಯದಲ್ಲಿ ಇಬ್ಬರು ಸತ್ತರು. ಬಳಿಕ ಆತನ 23 ವರ್ಷದ ಸಹೊದರ ಫಾವುದ್ 2015 ನವೆಂಬರ್ 13ರಲ್ಲಿ ನಡೆದ ಪ್ಯಾರಿಸ್ ದಾಳಿಯಲ್ಲಿ ಪಾಲ್ಗೊಂಡನು. ಆ ದಾಳಿಯಲ್ಲಿ ಕನಿಷ್ಠ 130 ಮಂದಿ ಮೃತಪಟ್ಟರು.
ಬಲೆಗೆ ಬೀಳಿಸುವುದಕ್ಕಾಗಿ ಇಸ್ಲಾಮ್
ಕರೀಮ್ ಮುಹಮ್ಮದ್ ಅಗ್ಗಾಡ್‌ನಿಗೆ ನ್ಯಾಯಾಲಯವೊಂದು ಒಂಬತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ‘‘ನನ್ನ ಧಾರ್ಮಿಕ ನಂಬಿಕೆಗಳಿಗೂ ನನ್ನ ಸಿರಿಯ ಪ್ರವಾಸಕ್ಕೂ ಯಾವುದೇ ಸಂಬಂಧವಿಲ್ಲ’’ ಎಂದು ಆತ ವಿಚಾರಣೆಯ ವೇಳೆ ತಿಳಿಸಿದನು. ‘‘ನನ್ನನ್ನು ಬಲೆಗೆ ಬೀಳಿಸುವುದಕ್ಕಾಗಿ ಇಸ್ಲಾಮನ್ನು ಬಳಸಲಾಯಿತು’’ ಎಂದು ಆತ ನ್ಯಾಯಾಲಯದಲ್ಲಿ ಹೇಳಿರುವುದಾಗಿ ನ್ಯಾಯಾಲಯದ ದಾಖಲೆಗಳು ತಿಳಿಸಿವೆ.
ಆತನ ಶರಿಯ ಮತ್ತು ಇಸ್ಲಾಮಿಕ್ ಕಾನೂನುಗಳ ಜ್ಞಾನ ಮತ್ತು ಅವುಗಳನ್ನು ಐಸಿಸ್ ಹೇಗೆ ಜಾರಿಗೊಳಿಸುತ್ತಿದೆ ಎಂಬುದನ್ನು ತಿಳಿಯಲು ನ್ಯಾಯಾಧೀಶರು ಪ್ರಶ್ನೆಗಳನ್ನು ಕೇಳಿದಾಗ ಆತ ಅವಾಕ್ಕಾದಂತೆ ಕಂಡಬಂದನು. ‘‘ಈ ಪ್ರಶ್ನೆಗೆ ಉತ್ತರಿಸಲು ನನ್ನಲ್ಲಿ ಅಷ್ಟು ಜ್ಞಾನವಿಲ್ಲ’’ ಎಂದು ಆತ ಪದೇ ಪದೇ ಹೇಳಿದನು.
ಆತನ ಜೊತೆಗಿದ್ದ ಸಹ ಆರೋಪಿ ರಡೌನೆ ತಾಹಿರ್‌ನಿಗೆ ನ್ಯಾಯಾಧೀಶರು ಈ ಪ್ರಶ್ನೆ ಕೇಳುತ್ತಾರೆ: ‘ತಲೆ ಕಡಿಯುವುದು ಇಸ್ಲಾಮಿಕ್ ಕಾನೂನಿಗೆ ಪೂರಕವಾಗಿದೆಯೇ?’’ ಆತನಿಗೆ ಆ ಬಗ್ಗೆ ಖಚಿತ ಅಭಿಪ್ರಾಯವಿರಲಿಲ್ಲ. ‘‘ಇದನ್ನು ಹೇಳುವ ಜ್ಞಾನ ನನಗಿಲ್ಲ’’ ಎಂದು ಆತ ಉತ್ತರಿಸಿದನು.
ಕುಖ್ಯಾತಿ, ರೋಮಾಂಚನಕ್ಕಾಗಿ ಐಸಿಸ್‌ಗೆ

ಐಸಿಸ್‌ಗೆ ನಿಷ್ಠೆ ಘೋಷಿಸುವ ಹೆಚ್ಚಿನವರು ಅಸ್ತಿತ್ವಕ್ಕಾಗಿ, ಕುಖ್ಯಾತಿ ಮತ್ತು ರೋಮಾಂಚನದ ಖುಷಿಗಾಗಿ ಹಾಗೆ ಮಾಡುತ್ತಾರೆ ಎಂದು ಸಿಐಎಯ ಮಾಜಿ ಅಧಿಕಾರಿ ಪ್ಯಾಟ್ರಿಕ್ ಸ್ಕಿನ್ನರ್ ಹೇಳುತ್ತಾರೆ.
ಐಸಿಸ್ ಕಮಾಂಡರ್‌ಗಳು ಇಸ್ಲಾಮ್ ವಿದ್ವಾಂಸರಲ್ಲ
ಐಸಿಸ್‌ನ ಉನ್ನತ ಕಮಾಂಡರ್‌ಗಳತ್ತ ಒಂದು ದೃಷ್ಟಿ ಹಾಯಿಸಿದಾಗ ತಿಳಿಯುವುದೇನೆಂದರೆ- ಹೆಚ್ಚಿನವರು ಪ್ರಮಾಣಿತ ಇಸ್ಲಾಮ್ ವಿದ್ವಾಂಸರಲ್ಲ, ಆದರೆ, ಅವರು ಸದ್ದಾಂ ಹುಸೈನ್‌ರ ಜಾತ್ಯತೀತವಾದಿ ಬಾತ್ ಪಕ್ಷದ ಸರಕಾರದಲ್ಲಿ ಉನ್ನತ ಹುದ್ದೆಗಳನ್ನು ಹೊಂದಿದ್ದವರು ಎಂದು ಇಸ್ಲಾಮಿಕ್ ವಿದ್ವಾಂಸ ತಾರೀಖ್ ರಮದಾನ್ ಹೇಳುತ್ತಾರೆ.
ಇಸ್ಲಾಮ್ ಬಗ್ಗೆ ಪ್ರಾಥಮಿಕ ಜ್ಞಾನವೇ ಇಲ್ಲ
ಐಸಿಸ್‌ಗೆ ನೇಮಕಗೊಂಡ ಹೆಚ್ಚಿನವರಿಗೆ ಇಸ್ಲಾಮ್ ಬಗ್ಗೆ ತಿಳುವಳಿಕೆಯೇ ಇಲ್ಲ ಎನ್ನುವುದನ್ನು ಸೋರಿಕೆಯಾದ ಸಾವಿರಾರು ಐಸಿಸ್ ದಾಖಲೆಗಳು ಹೇಳುತ್ತವೆ. ಹೊಸದಾಗಿ ನೇಮಕಗೊಂಡ 70 ಶೇಕಡ ಮಂದಿಗೆ ಶರಿಯದ ಬಗ್ಗೆ ‘‘ಪ್ರಾಥಮಿಕ’’ ಜ್ಞಾನ ಮಾತ್ರ ಇದೆ ಎಂಬುದನ್ನು ಸೋರಿಕೆಯಾದ ಸಾವಿರಾರು ದಾಖಲೆಗಳು ಹೇಳುತ್ತಿವೆ. 24 ಶೇ. ಮಂದಿಗೆ ಶರಿಯ ಬಗ್ಗೆ ಮಧ್ಯಮ ಮಟ್ಟದ ಜ್ಞಾನವಿದೆ. ಅವರ ಪೈಕಿ ಕೇವಲ 5 ಶೇಕಡ ಮಂದಿಯನ್ನು ಮಾತ್ರ ಇಸ್ಲಾಮ್‌ನ ಮುಂಚೂಣಿಯ ವಿದ್ಯಾರ್ಥಿಗಳು ಎಂಬುದಾಗಿ ಪರಿಗಣಿಸಲಾಗಿದೆ.
ಅವರ ಅಜ್ಞಾನವನ್ನೇ ಗುಂಪು ಬಳಸಿಕೊಳ್ಳುತ್ತದೆ. ಭೂಭಾಗ ವಿಸ್ತರಣೆ ಹಾಗೂ ಹತ್ಯಾಕಾಂಡದ ತನ್ನ ಗುರಿಯನ್ನು ಸಾಧಿಸುವುದಕ್ಕೆ ಪೂರಕವಾದ ಇಸ್ಲಾಮ್ ಕುರಿತ ವಿವರಣೆಯನ್ನು ಅದು ನೀಡುತ್ತದೆ.







