ಯುನಿವೆಫ್‌ನಿಂದ ಅಹ್ಮದ್ ಅನ್ವರ್‌ರಿಗೆ ‘ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ’ ಪ್ರದಾನ

ಮಂಗಳೂರು, ಆ.16: ಯುನಿವರ್ಸಲ್ ವೆಲ್ಫೇರ್ ಫೋರಮ್-ಯುನಿವೆ್ ಕರ್ನಾಟಕ ಇದರ 2016ರ ಸಾಲಿನ ಪ್ರತಿಷ್ಠಿತ ‘ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ’ಯನ್ನು ಪತ್ರಿಕಾ ಛಾಯಾಗ್ರಾಹಕ, ಕವಿ, ಲೇಖಕ ಅಹ್ಮದ್ ಅನ್ವರ್‌ರಿಗೆ ಪ್ರದಾನ ಮಾಡಲಾಯಿತು.
ಸಾಮಾಜಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮುದಾಯದ ಅಭ್ಯುದಯಕ್ಕಾಗಿ ಶ್ರಮಿಸುವವರನ್ನು ಗುರುತಿಸಿ ಯುನಿವೆ್ ಕರ್ನಾಟಕ ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಸ್ವಾತಂತ್ರೋತ್ಸವದಂದು ತಮ್ಮ ಸ್ವಗ್ರಹದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಹ್ಮದ್ ಅನ್ವರ್, ನಾನು ಈ ಕ್ಷೇತ್ರಕ್ಕೆ ಬಯಸಿ ಬಂದವನಲ್ಲ. ಯಾವತ್ತೂ ನನಗೆ ಸರಿಕಂಡದ್ದನ್ನು, ಮನಸ್ಸಿಗೆ ತೃಪ್ತಿ ನೀಡುವುದನ್ನು ಮಾಡುತ್ತಾ ಬಂದಿದ್ದೇನೆ. ಸಾಧಿಸಬೇಕಾದದ್ದು ಬಹಳ ಇದೆ. ಈಗ ಸೃಷ್ಟಿಕರ್ತನ ಪರೀಕ್ಷೆಗೊಳಗಾಗಿದ್ದೇನೆ. ಯುನಿವೆಫ್‌ನ ಪ್ರತಿಷ್ಠಿತ ಪ್ರಶಸ್ತಿ ನನ್ನನ್ನು ಅರಸಿಕೊಂಡು ಬಂದಿರುವುದು ಅನಿರೀಕ್ಷಿತ. ಇದು ಬಹಳ ಸಂತೋಷವನ್ನು ತಂದಿದೆ ಎಂದರು.
ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಪ್ರಶಸ್ತಿ ಪತ್ರವನ್ನು ವಾಚಿಸುತ್ತಾ, ಕವಿಯಾಗಿ, ಲೇಖಕರಾಗಿ, ಪತ್ರಿಕಾ ಛಾಯಾಗ್ರಾಹಕರಾಗಿ ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿರುವ ಅಹ್ಮದ್ ಅನ್ವರ್‌ರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಯುನಿವೆಫ್ ಕರ್ನಾಟಕದ ಸಮಂಜಸ ಆಯ್ಕೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯುನಿವೆ್ ಕರ್ನಾಟಕದ ಅಧ್ಯಕ್ಷ ರಫಿೀಉದ್ದೀನ್ ಕುದ್ರೋಳಿ, ಸಮುದಾಯವಿಂದು ಸ್ವಯಂಸೇವಕರ ಕೊರತೆಯನ್ನು ಅನುಭವಿಸುತ್ತಾ ಇದೆ. ನಿರ್ದಿಷ್ಟ ಗುರಿ ಮತ್ತು ಯೋಜನೆಯೊಂದಿಗೆ ಸಮುದಾಯದ ಸಬಲೀಕರಣಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರ ಅಗತ್ಯವಿದೆ. ಅಂತಹ ವ್ಯಕ್ತಿತ್ವವನ್ನು ಗುರುತಿಸಿ ಅವರನ್ನು ಹುರಿದುಂಬಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕೆರಿಯರ್ ಗೈಡೆನ್ಸ್ ಮತ್ತು ಇನ್ಫಾರ್ಮೇಶನ್ ಸೆಂಟರ್‌ನ ಅಧ್ಯಕ್ಷ ಉಮರ್ ಯು.ಎಚ್. ಕಾರ್ಯಕ್ರಮ ನಿರೂಪಿಸಿದರು.







