ರಿಯೋ: ಎಡವಟ್ಟುಗಳ ಸರಮಾಲೆ ಮುಂದುವರಿಸಿದ ಭಾರತದ ಕ್ರೀಡಾ ಸಚಿವ

ರಿಯೋ ಡಿ ಜನೈರೊ, ಆ.16: ಕೇಂದ್ರ ಸಚಿವ ವಿಜಯ್ ಗೋಯಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವಾರ ಸಚಿವ ಗೋಯಲ್ ಬೆಂಬಲಿಗರು ರಿಯೋ ಒಲಿಂಪಿಕ್ಸ್‌ನ ನಿಷೇಧಿತ ಸ್ಥಳಗಳಿಗೆ ತೆರಳಿದ್ದದಲ್ಲದೆ , ಅಲ್ಲಿ ಗೂಂಡಾ ವರ್ತನೆ ತೋರಿದ ಹಿನ್ನೆಲೆಯಲ್ಲಿ ರಿಯೋ ಒಲಿಂಪಿಕ್ಸ್‌ನ ಆಯೋಜಕರು ಭಾರತದ ಕ್ರೀಡಾ ಸಚಿವರ ಮಾನ್ಯತಾ ಪತ್ರವನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಇದೀಗ ಸಚಿವ ಗೋಯಲ್ ಅವರಿಗೆ ಜಿಮ್ನಾಸ್ಟಿಕ್‌ನಲ್ಲಿ ಭಾರತದ ಪರ ಅತ್ಯುತ್ತಮ ಸಾಧನೆ ಮಾಡಿದ್ದ ದೀಪಾ ಕರ್ಮಾಕರ್ ಹೆಸರು ಸರಿಯಾಗಿ ಗೊತ್ತಿಲ್ಲ !
,ಜಿಮ್ನಾಸ್ಟಿಕ್‌ನ ವಾಲ್ಟ್‌ನಲ್ಲಿ ರವಿವಾರ ನಾಲ್ಕನೆ ಸ್ಥಾನದೊಂದಿಗೆ ದಾಖಲೆ ಬರೆದ ದೀಪಾ ಕರ್ಮಾಕರ್ ಅವರನ್ನು ಟ್ವೀಟರ್‌ನಲ್ಲಿ ಅಭಿನಂದಿಸುವಾಗ ಅವರ ಹೆಸರನ್ನು ತಪ್ಪಾಗಿ ದೀಪಾ ಕರ್ಮಾಣಾಕಾರ್ ಎಂದು ಟ್ವೀಟ್ ಮಾಡಿದ್ದರು. ಭಾರತದ ಕೋಟ್ಯಾಂತರ ಜನರ ಮನ ಗೆದ್ದ ದೀಪಾ ಕರ್ಮಾಕರ್ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ ಕಾರಣಕ್ಕಾಗಿ ವಿಜಯ್ ಗೋಯಲ್ ಅವರ ವಿರುದ್ಧ ಸಾಮಾಜಿಕ ಜಾಲಾ ತಾಣ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ‘‘ ಬೆಸ್ಟ್ ಆಫ್ ಲಕ್ ದೀಪಾ ಕರ್ಮಾಣಾಕರ್, ಇಂಡಿಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ವುಮೆನ್ಸ್ ವಾಲ್ಟ್ # ಖೇಲೊ ಇಂಡಿಯಾ # ಜೀತೊರಿಯೋ’’ ಎಂದು ವಿಜಯ್ ಗೋಯಲ್ ಟ್ವೀಟ್ ಮಾಡಿದ್ದರು.
ದೀಪಾ ಹೆಸರು ಮರೆತು ಹೋಗಿರುವಂತೆ ದ್ಯುತಿ ಚಂದ್ ಮತ್ತು ಸ್ರಬಾನಿ ನಂದಾ ಅವರ ಬಗ್ಗೆಯೋ ಸಚಿವರಿಗೆ ಸರಿಯಾಗಿ ಗೊತ್ತಿಲ್ಲ. ಇವರನ್ನು ನೋಡಿದ ನೆನಪು ಸಚಿವರಿಗಿಲ್ಲ. ನಂದಾ ಅವರಿಗೆ ಅಭಿನಂದನೆ ಹೇಳುವಾಗ ನಂದ ಬದಲಿಗೆ ದ್ಯುತಿ ಭಾವಚಿತ್ರವನ್ನು ಬಳಸಿಕೊಂಡಿದ್ದಾರೆ.ಇಂತಹ ಎಡವಟ್ಟು ಮಾಡಿಕೊಂಡಿರುವ ಸಚಿವರ ವಿರುದ್ಧ ಇದೀಗ ಆಕ್ರೋಶ ವ್ಯಕ್ತವಾಗಿದೆ





