150 ತಾಲೂಕುಗಳಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು,ಆ.16: ಕೈಗಾರಿಕೆಗಳಿಗೆ ಅಗತ್ಯ ವಿದ್ಯುತ್ ಪೂರೈಕೆ ಉದ್ದೇಶದಿಂದ ರಾಜ್ಯದ 150 ತಾಲೂಕುಗಳಲ್ಲಿ ತಲಾ ಒಂದು ಸಾವಿರ ಮೆಗಾ ಯೂನಿಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪಾರ್ಕ್‌ಗಳನ್ನು ಸ್ಥಾಪಿಸಲು ಸರಕಾರ ಚಿಂತಿಸಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯಕ್ಕೆ ಹಿಂದಿನ ವರ್ಷ ಮತ್ತು ಈ ವರ್ಷ ಬರಗಾಲ ಕಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಕೈಗಾರಿಕೆಗಳಿಗೆ ವಿದ್ಯುತ್ ಕೊರತೆಯಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಕೈಗಾರಿಕೆಗಳಿಗೆ ದಿನದ 24 ಗಂಟೆಯೂ ವಿದ್ಯುತ್ ಪೂರೈಸಲು ಸರಕಾರ ಸಿದ್ಧವಿದೆ. ಈಗಾಗಲೇ ಕೇಂದ್ರ ಸರಕಾರದ ಸಹಯೋಗದಲ್ಲಿ ಪಾವಗಡದಲ್ಲಿ 5 ಸಾವಿರ ಮೆಗಾ ಯೂನಿಟ್ ವಿದ್ಯುತ್ ಉತ್ಪಾದಿಸುವ ಮೆಗಾ ಸೋಲಾರ್ ಪಾರ್ಕ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಅಲ್ಲದೆ ರಾಜ್ಯದ 150 ತಾಲೂಕುಗಳಲ್ಲಿ ಒಂದು ಸಾವಿರ ಮೆ.ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಸೋಲಾರ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರಕಾರ ಚಿಂತಿಸಿದೆ. ಈ ಪಾರ್ಕ್ ನಿರ್ಮಾಣಕ್ಕೆ ರೈತರಿಂದ ಭೂಮಿಯನ್ನು ಭೋಗ್ಯಕ್ಕೆ ಪಡೆಯಲಾಗುತ್ತಿದೆ. ಈ ಯೋಜನೆ ಕೇಂದ್ರ ಸರಕಾರದ ಯೋಜನೆಗಳಿಗೆ ಸೆಡ್ಡು ಹೊಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಶಾಂತಿ ಮತ್ತು ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ಹೀಗಾಗಿ ಅಂತಾರಾಷ್ಟ್ರೀಯ ಉದ್ಯಮಿಗಳು ಕರ್ನಾಟಕ ರಾಜ್ಯ ಅತ್ಯಂತ ಸುರಕ್ಷಿತ ಸ್ಥಳ ಎಂದು ಅರಿತು ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಉತ್ಸುಕತೆಯನ್ನು ತೋರುತ್ತಿದ್ದಾರೆ. ಇನ್ಫೋಸಿಸ್ ಸೇರಿದಂತೆ ಇತರೆ ಅಂತಾರಾಷ್ಟ್ರೀಯ ಐಟಿ ಬಿಟಿ ಸಂಸ್ಥೆಗಳು ರಾಜ್ಯದಲ್ಲಿ ಸ್ಥಾಪನೆಯಾಗಿರುವುದಕ್ಕೆ ಇಲ್ಲಿನ ವಾತಾವರಣವೇ ಸಾಕ್ಷಿ ಎಂದು ಹೇಳಿದರು.
ಉತ್ಪಾದನಾ ಕ್ಷೇತ್ರದಲ್ಲಿ ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು ರಾಜ್ಯಗಳಿಗಿಂತ ಕರ್ನಾಟಕ ಮುಂದಿದೆ. ತಾಂತ್ರಿಕತೆ ಮತ್ತು ಮಾನವ ಸಂಪನ್ಮೂಲದಲ್ಲಿ ಒಂದು ಪಾಲು ಹೆಚ್ಚಿದೆ. ರಾಜ್ಯದಲ್ಲಿ 300ಕ್ಕೂ ಅಧಿಕ ಎಂಜನಿಯರ್ ಮತ್ತು ಡಿಪ್ಲೊಮೊ ಕಾಲೇಜಿಗಳಿಂದ ವರ್ಷವೊಂದಕ್ಕೆ 80 ಲಕ್ಷ ಎಂಜನಿಯರ್‌ಗಳು ಉತ್ಪತ್ತಿಯಾಗುತ್ತಿದ್ದಾರೆ. 370ಕ್ಕೂ ಅಧಿಕ ಐಟಿಬಿಟಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಕರ್ನಾಟಕ ಉದ್ಯೋಗ ಹಬ್ ಆಗಿ ಪರಿವರ್ತನೆಯಾಗುತ್ತಿದೆ ಎಂದ ಅವರು, ವಿದೇಶಿ ಉದ್ಯಮಿಗಳನ್ನು ಆಕರ್ಷಿಸಲು ಜನವರಿ ತಿಂಗಳಲ್ಲಿ ಪ್ರವಾಸಿ ದಿವಸ್ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಉದ್ಯೋಗ ಸೃಷ್ಟಿಸುವ ಕೇತ್ರಗಳಾದ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಸಣ್ಣ ಕೈಗಾರಿಕೆಗಳಿಗೆ 99 ವರ್ಷಗಳ ಭೋಗ್ಯ (ಲೀಸ್)ನಿಯಮವನ್ನು ಹಿಂಪಡೆಯುವ ಕುರಿತು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡ ತರಲಾಗುವುದು ಎಂದರು.
ಕೆಎಸ್‌ಎಸ್‌ಐಡಿಸಿ ಅಧ್ಯಕ್ಷ ಡಾ.ಬಿ.ಗುರಪ್ಪ ನಾಯ್ಡು ಮಾತನಾಡಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ 317 ಎಕರೆ ಜಮೀನನ್ನು ಕಳೆದ ಮೂರು ವರ್ಷಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. 1,013ರಿಂದ ಇದುವರೆಗೂ 1,293 ನಿವೇಶನಗಳ ಅಭಿವೃದ್ಧಿ ಪಡಿಸಿ, ಇವುಗಳಲ್ಲಿ 1,210 ನಿವೇಶನಗಳ ಹಂಚಿಕೆ ಮಾಡಲಾಗಿದೆ. ಈ ವರ್ಷದಲ್ಲಿ ಒಟ್ಟು 121 ಕೈಗಾರಿಕಾ ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 139 ಕೋಟಿ ರೂ.ಗಳ ಕಬ್ಬಿಣ ಮತ್ತು ಉಕ್ಕಿನ ಕಚ್ಚಾ ವಸ್ತುಗಳನ್ನು ಪೂರೈಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎ.ಎಂ.ಪಠಾಣ್, ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ಮೊಹಸಿನ್, ಕಾಸಿಯಾ ಅಧ್ಯಕ್ಷ ಎ.ಪದ್ಮನಾಭ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







