ಪದ್ಮುಂಜ: ಬ್ಯಾಂಕ್ ದರೋಡೆ ಯತ್ನ ವಿಫಲ
.jpg)
ಉಪ್ಪಿನಂಗಡಿ, ಆ.16: ಕಿಟಕಿಯ ಸರಳುಗಳನ್ನು ತುಂಡರಿಸಿ ಬ್ಯಾಂಕ್‌ಗೆ ನುಗ್ಗಿದ ಕಳ್ಳರು ಲಾಕರ್ ತೆರೆಯಲು ಸಾಧ್ಯವಾಗದಿರುವುದರಿಂದ ದರೋಡೆ ಯತ್ನ ವಿಫಲವಾಗಿ ಬರಿಗೈಯಲ್ಲಿ ವಾಪಸಾದ ಘಟನೆ ಮಂಗಳವಾರ ಪದ್ಮುಂಜದ ಕೆನರಾ ಬ್ಯಾಂಕ್‌ನಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಕೆನರಾ ಬ್ಯಾಂಕ್‌ನ ಶಾಖೆಗೆ ಕನ್ನ ಹಾಕಿರುವ ಕಳ್ಳರು ಬ್ಯಾಂಕ್ ವ್ಯವಸ್ಥಾಪಕರ ಕೊಠಡಿಯ ಕಿಟಕಿಯ ಸರಳನ್ನು ಗ್ಯಾಸ್ ಕಟ್ಟರ್ ಮೂಲಕ ತುಂಡರಿಸಿದ್ದು, ಒಳಗಡೆ ನುಗ್ಗಿದ್ದಾರೆ. ಬಳಿಕ ಅಲ್ಲಿಂದ ಲಾಕರ್ ಇರುವ ಕಡೆ ತೆರಳಿ ಲಾಕರ್ ತೆರೆಯಲು ವಿಫಲ ಯತ್ನ ನಡೆಸಿರುವುದು ಕಂಡುಬರುತ್ತದೆ. ಆದರೆ ಲಾಕರ್ ತೆರೆಯಲು ವಾತ್ರ ಅವರಿಂದ ಸಾಧ್ಯವಾಗಿಲ್ಲ. ಬ್ಯಾಂಕ್‌ನ ಸಿಬ್ಬಂದಿ ಮಂಗಳವಾರ ಬ್ಯಾಂಕ್‌ಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಈ ಬಗ್ಗೆ ಬ್ಯಾಂಕ್‌ನವರು ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಎಸ್. ಕುಲಕರ್ಣಿ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದ ಉಪ್ಪಿನಂಗಡಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ತಪಾಸಣೆ ನಡೆಸಲಾಗಿದೆ.
ಬ್ಯಾಂಕ್‌ಗೆ ಶನಿವಾರದಿಂದ ಸೋಮವಾರದ ತನಕ ರಜೆಯಿದ್ದು, ಈ ಅವಧಿಯಲ್ಲಿ ಕಳ್ಳರು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಕಳ್ಳರು ಬ್ಯಾಂಕ್‌ನಿಂದ ಬರಿಗೈಯಲ್ಲಿ ವಾಪಸಾದರೂ ಹೋಗುವಾಗ ಬ್ಯಾಂಕ್‌ನ ಸಿಸಿ ಕ್ಯಾಮರಾದಲ್ಲಿ ಚಿತ್ರೀಕರಣಗೊಳ್ಳುವ ದೃಶ್ಯಗಳು ಶೇಖರಣೆಯಾಗುವ ಡಿವಿಆರ್ ಬಾಕ್ಸ್ ಅನ್ನೇ ಹೊತ್ತೊಯ್ದಿದ್ದಾರೆ. ಮತ್ತೊಂದೆಡೆ ಬ್ಯಾಂಕ್‌ನ ಪ್ರಧಾನ ಬಾಗಿಲಿಗೆ ಅಳವಡಿಸಿದ್ದ ಸೈರನ್‌ನ ವಯರ್ ಅನ್ನು ಕೂಡಾ ಕಿತ್ತು ಹಾಕಿದ್ದಾರೆ. ಇದರಿಂದ ಲಾಕರ್ ತೆರೆಯಲು ಪ್ರಯತ್ನಪಟ್ಟರೂ ಸೈರನ್ ಮಾತ್ರ ಮೊಳಗಲಿಲ್ಲ. ಬ್ಯಾಂಕ್‌ಗೆ ಬಂದ ಕಳ್ಳರು ಚಾಣಾಕ್ಷ ನಡೆ ಅನುಸರಿಸಿದ್ದು, ಇವರು ವೃತ್ತಿಪರ ಕಳ್ಳರಾಗಿರಬಹುದೆಂದು ಶಂಕಿಸಲಾಗಿದೆ.
ಪದ್ಮುಂಜ ಕೂಡಾ ಗ್ರಾಮೀಣ ಪ್ರದೇಶವಾಗಿದ್ದು, ಜನವಸತಿ, ವಾಹನ ಸಂಚಾರ ವಿರಳ. ಅಲ್ಲದೇ, ಇಲ್ಲಿಗೆ ಬರಲು ಹಲವು ದಾರಿಗಳಿರುವುದರಿಂದ ಪರಾರಿಯಾಗಲು ಕಳ್ಳರಿಗೆ ಸುಲಭವಾಗುವಂತಾಗಿದೆ. ಬ್ಯಾಂಕ್‌ನಲ್ಲಿ ಸುಮಾರು 12 ಲಕ್ಷದಷ್ಟು ನಗದು ಹಾಗೂ ಅದಕ್ಕೂ ಅಧಿಕ ವೌಲ್ಯದ ಚಿನ್ನಾಭರಣ ಇತ್ತೆಂದು ಹೇಳಲಾಗುತ್ತಿದೆ. ಆದರೂ ಬ್ಯಾಂಕ್‌ನ ಹೊರಗಡೆ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. ಹಾಗೂ ಗುಪ್ತ ಜಾಗದಲ್ಲಿ ಇಡಬೇಕಾದ ಡಿವಿಆರ್ ಬಾಕ್ಸ್ ಹಾಗೂ ಸೈರನ್ ಅನ್ನು ಎಲ್ಲರಿಗೂ ಕಾಣುವಂತೆ ಇಡುವ ಮೂಲಕ ಬ್ಯಾಂಕ್‌ನವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ದರೋಡೆ ಯತ್ನದ ಬಗ್ಗೆ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ಪ್ರದೀಪ್ ಕುಮಾರ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.







