ಕನ್ನಡ ಭಾಷೆ ತವರು ಮನೆ ಇದ್ದಂತೆ: ಮಹೇಶ್
ಕಸಾಪ: ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಕಾರ್ಯಕ್ರಮ

ಕಳಸ, ಆ.16: ಕನ್ನಡ ಭಾಷೆಯಲ್ಲಿನ ನಾಟಕ, ಸಿನೆಮಾ, ಬಯಲಾಟ, ಜಾನಪದ ನೃತ್ಯ ಸಂಗೀತಗಳನ್ನು ನೋಡಿ ಕೇಳುವುದರ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬಹುದು ಎಂದು ಉಪನ್ಯಾಸಕ ಮಹೇಶ್ ಚಟ್ನಲ್ಲಿ ಹೇಳಿದ್ದಾರೆ.
ಪಟ್ಟಣದ ರೋಟರಿ ಭವನದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಕಳಸ ಹೋಬಳಿಯ ನೂತನ ಪದಾಧಿಕಾರಿಗಳ ಸೇವಾದೀಕ್ಷೆ ಸಮಾರಂಭದಲ್ಲಿ ಮಾತನಾಡಿದರು.
ಇನ್ನು 50 ವರ್ಷಗಳಲ್ಲಿ 300 ಭಾಷೆಗಳು ಮಾತ್ರ ಉಳಿಯಬಲ್ಲದು, ಅದರಲ್ಲಿ ಕನ್ನಡವೂ ಒಂದು.ಗ್ರಾಮೀಣ ಭಾಗಗಳಲ್ಲಿ ಕನ್ನಡದ ಬಳಕೆ ಹೆಚ್ಚಾಗಿದ್ದರೂ ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಕನ್ನಡ ಹಾಳಾಗಿದೆ. ಆಂಗ್ಲ ಭಾಷೆಯ ಪ್ರಭಾವ ಹೆಚ್ಚಾಗಿದೆ. ಕನ್ನಡ ಭಾಷೆ ಎನ್ನುವುದು ತವರು ಮನೆ ಇದ್ದಂತೆ. ಅನ್ಯ ಭಾಷೆಯನ್ನು ಗೌರವಿಸಿ ನಮ್ಮ ಮಾತೃ ಭಾಷೆಯನ್ನು ಪ್ರೀತಿಸಿ ಎಂದು ಅವರು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ, ಸಾಹಿತ್ಯದ ಹೊರತಾಗಿ ಇತಿಹಾಸವಿಲ್ಲ, ಇತಿಹಾಸ ಬಿಟ್ಟು ಸಾಹಿತ್ಯವಿಲ್ಲ. ಸಂಖ್ಯಾ ದೃಷ್ಟಿಯಿಂದ ಕನ್ನಡ ನಾಡು ಬಹುದೊಡ್ಡದು. 8 ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಭಾಷೆಯ ಸ್ಥಿತಿ ಇಂದು ಶೋಚನೀಯವಾಗಿದೆ.ಕನ್ನಡ ಮಾಧ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕು. ಆಧುನಿಕ ಕಾಲದಲ್ಲಿ ಹೊಸ ತಂತ್ರಾಂಶಗಳನ್ನು ಬಳಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದರೊಂದಿಗೆ ಕನ್ನಡದ ಸಂಸ್ಕೃತಿ-ಸೊಗಡನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಸಾಪದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಕೆ.ವಿ.ನರೇಂದ್ರ ಕಲ್ಲಾನೆ, ಉಪಾಧ್ಯಕ್ಷರಾಗಿ ಬ್ರಹ್ಮದೇವ, ಚಂಪಾ ಎನ್.ಎಂ.ರಾವ್, ಕೋಶಾಧ್ಯಕ್ಷರಾಗಿ ಕೆ.ತಿಮ್ಮಪ್ಪ ಗೌಡ, ಗೌರವ ಕಾರ್ಯದರ್ಶಿಯಾಗಿ ಸುಧೀಶ್ ಸುವರ್ಣ, ಕಿರಣ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಮ ಭಟ್, ಮಲ್ಲಿಕಾರ್ಜುನ, ಸಹಾಯಕ ಕಾರ್ಯದರ್ಶಿಯಾಗಿ ಎಂ.ಎ.ರವೀಂದ್ರ ಭಟ್, ಎ.ಎಸ್.ಗುರುದತ್ತ, ಮಂಜಪ್ಪ ಎನ್.ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಫಾತಿಮಾ ರೆಹಮಾನ್, ವಿವೇಕಾನಂದ ಗಾಂವ್ಕರ್, ಶಿವಪ್ಪ, ಕೀರ್ತಿ ಜೈನ್, ಶಿವರಾಮ ರಾಗಿಹಳ್ಳಿ, ಆಶಾಲತಾ ಜೈನ್, ಅಶೋಕ್.ಟಿ, ಸುರೇಂದ್ರ ಬಿ.ಎಂ, ಅಣ್ಣಯ್ಯ, ವಿಶ್ವನಾಥ, ಉದಯ ಕುಮಾರ್, ಶ್ರೀನಿವಾಸ ಹೆಬ್ಬಾರ್, ಅಗಸ್ಟೀನ್, ರವಿಕಿರಣ್, ಲಿಂಗಪ್ಪ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಹೋಬಳಿಯ ಶಾಲೆಯ 10ನೆ ತರಗತಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಅಬ್ದುಲ್ ಕರೀಂ, ಅ.ರಾ.ರಾಧಾಕೃಷ್ಣ, ಅ.ರಾ.ಸತೀಶ್ಚಂದ್ರ, ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.







