ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಪ್ರತಿಭಟನೆ
ಉಡುಪಿ, ಆ.16: ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪಾಲಿಟೆಕ್ನಿಕ್ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಡಿಟಿಇ ಬೋರ್ಡ್ ಕ್ಯಾರಿ ಓವರ್ ಪದ್ಧತಿಯಲ್ಲಿ ಅನೇಕ ರೀತಿಯ ಗೊಂದಲ ಇದ್ದು, ಇದು ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಯಾಗಿದೆ. ಡಿಪ್ಲೊಮಾ ಸಂಬಂಧಿಸಿದಂತೆ ಸಿಲೆಬಸ್ ಸಂಪೂರ್ಣವಾಗಿ ಬದಲಾವಣೆಯಾಗಿದ್ದರೂ ಡಿಪ್ಲೊಮಾ ಬೋರ್ಡ್ ವಿದ್ಯಾರ್ಥಿಗಳಿಗೆ ತರಗತಿಗೆ ಮುಕ್ತ ಅವಕಾಶವನ್ನು ಕಲ್ಪಿಸುತ್ತಿಲ್ಲ. ಬೋರ್ಡಿನ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದ ಈ ರೀತಿ ಮಾಡಲಾಗುತ್ತಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಪ್ರಜ್ವಲ್ ಡಿ. ಶೆಟ್ಟಿ ಆರೋಪಿಸಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ಗೆ ಈ ಕುರಿತು ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈ ಸಂಬಂಧ ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ರೋಹಿತ್ ಪೂಜಾರಿ, ಶ್ರೀವತ್ಸ, ಚೇತನ್ ಪೂಜಾರಿ, ಲಿಖಿತ್, ಶಾಹಿಲ್, ವಿಶ್ವಾಸ್ ಮತ್ತಿತರು ಉಪಸ್ಥಿತರಿದ್ದರು.





