ಇಂದು ದಾವೂದ್ ಸೋದರಳಿಯನ ಮದುವೆ
ಕಟ್ಟೆಚ್ಚರದಲ್ಲಿ ಮುಂಬೈ ಪೊಲೀಸರು
ಮುಂಬೈ,ಆ.16: ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹೀಂ ಕಾಸ್ಕರ್ನ ಸೋದರಿ ಹಸೀನಾ ಪಾರ್ಕ್ರ್ಕಿರಿಯ ಪುತ್ರನ ವಿವಾಹ ಸಮಾರಂಭವು ಬುಧವಾರ ಇಲ್ಲಿಯ ತುಲಿಪ್ ಪಂಚತಾರಾ ಹೋಟೆಲ್ನಲ್ಲಿ ನಡೆಯಲಿದೆ. ಸಮಾರಂಭಕ್ಕೆ ಆಗಮಿಸುವ ಅತಿಥಿಗಳ ಮೇಲೆ ಕಣ್ಣಿರಿಸಲು ಮತ್ತು ದಾವೂದ್ ಕುರಿತು ಏನಾದರೂ ಮಾಹಿತಿ ಸಂಗ್ರಹಿಸಲು ಸಾಧ್ಯವೇ ಎಂಬ ಬಗ್ಗೆ ಮುಂಬೈ ಪೊಲೀಸರು ಸಜ್ಜಾಗಿದ್ದಾರೆ. ದಾವೂದ್ನ ಸೋದರ ಇಕ್ಬಾಲ್ ಕಾಸ್ಕರ್ ಸಮಾರಂಭದಲ್ಲಿ ಪಾಲ್ಗೊಳ್ಳುವ ಹೆಚ್ಚಿನ ಸಾಧ್ಯತೆಯಿದೆ.
ದಾವೂದ್ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿವಾಹ ಸಮಾರಂಭದಲ್ಲಿ ಭಾಗಿಯಾಗಬಹುದು ಎಂದು ಕೆಲವು ವರದಿಗಳು ತಿಳಿಸಿವೆ. ಈ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ,ವೀಡಿಯೋ ಕಾನ್ಫರೆನ್ಸಿಂಗ್ ಬಗ್ಗೆ ನಾವು ಏನೂ ಹೇಳುವುದಿಲ್ಲ,ಆದರೆ ಸಮಾರಂಭದ ವ್ಯವಸ್ಥೆಗಳ ಮೇಲೆ ನಿಗಾ ಇರಿಸುತ್ತೇವೆ ಮತ್ತು ಭೂಗತ ಪಾತಕಿಯು ನಮ್ಮ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚದಂತೆ ನೋಡಿಕೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಉತ್ತರಿಸಿದರು. ಅತಿಥಿಗಳ ಚಲನವಲನಗಳ ಮೇಲೆ ಮುಂಬೈ ಕ್ರೈಂ ಬ್ರಾಂಚಿನ ಹಫ್ತಾ ನಿಗ್ರಹ ಘಟಕವೂ ಕಣ್ಣಿರಿಸಲಿದೆ ಎಂದು ಮೂಲಗಳು ತಿಳಿಸಿದವು.
ಮಹಿಳಾ ಅಧಿಕಾರಿಗಳು ಸೇರಿದಂತೆ ಮುಂಬೈ ಕ್ರೈಂ ಬ್ರಾಂಚಿನ ಗುಪ್ತಚರ ವಿಭಾಗದ ಅಧಿಕಾರಿಗಳು ಮಫ್ತಿಯಲ್ಲಿ ಅತಿಥಿಗಳೊಂದಿಗೆ ಬೆರೆಯಲಿದ್ದಾರೆ. ಮೊದಲಿಗೆ ನಿಖಾ ಮಸೀದಿಯಲ್ಲಿ ನಡೆಯಲಿದೆ ಮತ್ತು ಬಳಿಕ ಮದುವೆ ಪಾರ್ಟಿ ಯು ರಾತ್ರಿ 7:30ಕ್ಕೆ ತುಲಿಪ್ ಹೋಟೆಲ್ನಲ್ಲಿ ನಡೆಯಲಿದೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ದಾವೂದ್ ಸಮಾರಂಭದಲ್ಲಿ ಭಾಗಿಯಾಗುವ ಸಾಧ್ಯತೆ ತೀರಾ ಕಡಿಮೆಯೆಂದು ಮೂಲಗಳು ತಿಳಿಸಿವೆ.