ಮಹಿಳೆಯ ಕೊಲೆ: ಪತಿ-ಅತ್ತೆಗೆ ಜೀವಾವಧಿ ಶಿಕ್ಷೆ

ಬಂಟ್ವಾಳ, ಆ. 16: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2011ರಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯನ್ನು ಹತ್ಯೆಗೈದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು 1ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ಯೆಗೀಡಾದ ಮಹಿಳೆಯ ಪತಿ ಮತ್ತು ಆಕೆಯ ಅತ್ತೆಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ವಿಟ್ಲ ಕಸಬಾ ಗ್ರಾಮದ ಅಪ್ಪೇರಿ ಪಾದೆಮನೆ ನಿವಾಸಿ ಪಾರ್ವತಿ (60) ಮತ್ತವರ ಮಗ ರವೀಶ್ (43) ಜೀವಾವಧಿ ಶಿಕ್ಷೆಗೊಳಗಾದವರು.
ವಿವರ: ರವೀಶ್ ತನ್ನ ಪತ್ನಿ ಸರಸ್ವತಿ, ಮಗ ರೋಹಿತಾಶ್ವ ಮತ್ತು ತಾಯಿ ಪಾರ್ವತಿಯೊಂದಿಗೆ ಅಪ್ಪೇರಿ ಪಾದೆಮನೆಯಲ್ಲಿ ವಾಸಿಸುತ್ತಿದ್ದರು. 2011ರ ಫೆ.17ರಂದು ಬೆಳಗ್ಗೆ 8 ಗಂಟೆಗೆ ರವೀಶ್ ಮತ್ತು ಆತನ ತಾಯಿ ಪಾರ್ವತಿ ಸೇರಿ ಸರಸ್ವತಿಯನ್ನು ಮನೆಯ ಜಗಲಿಯಲ್ಲೇ ಕತ್ತಿಯಿಂದ ಕಡಿದಿದ್ದರು. ಸರಸ್ವತಿಯ ತಲೆ, ಕೈ, ಕುತ್ತಿಗೆ ಸೇರಿದಂತೆ ದೇಹದ 18 ಕಡೆಗಳಲ್ಲಿ ಆಳವಾದ ಗಾಯವಾಗಿದ್ದರಿಂದ ರಕ್ತಸ್ರಾವಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಎಲ್ಲ ಘಟನೆಯನ್ನು ದಂಪತಿಯ ಮಗ ರೋಹಿತಾಶ್ವ ಪ್ರತ್ಯಕ್ಷವಾಗಿ ನೋಡಿದ್ದ. ಘಟನೆಯ ಬಗ್ಗೆ ಪ್ರಕರಣ ದಾಖಲಿಸಿದ್ದ ವಿಟ್ಲ ಠಾಣೆಯ ಪೊಲೀಸರು ತನಿಖೆ ನಡೆಸಿದ್ದು, ಬಂಟ್ವಾಳ ಠಾಣಾ ಪೊಲೀಸ್ ನಿರೀಕ್ಷಕ ನಂಜುಡ್ಡೆಗೌಡ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದರು. ಪ್ರಕರಣದಲ್ಲಿ ಪ್ರಾರಂಭಿಕ ಹಂತದಲ್ಲಿ ಪುಷ್ಪರಾಜ್ ಮತ್ತು ಬಳಿಕ ರಾಜು ಪೂಜಾರಿ ಬನ್ನಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು. 23 ಮಂದಿ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು.
ದಂಪತಿಯ ಮಗ ರೋಹಿತಾಶ್ವ ಘಟನೆ ಬಗ್ಗೆ ನ್ಯಾಯಾಲಯದಲ್ಲಿ ಪ್ರತ್ಯಕ್ಷ ಸಾಕ್ಷಿ ನೀಡಿದ್ದು, ಎಲ್ಲ ಸಾಕ್ಷಾಧಾರಗಳನ್ನು ಪರಿಗಣಿಸಿದ ನ್ಯಾಯಾಧೀಶ ಸಿ.ಎಂ.ಜೋಶಿ ಅಪರಾಧಿಗಳಿಗೆ ಭಾರತೀಯ ದಂಡ ಸಂಹಿತೆ 302ರಡಿ ಜೀವಾವಧಿ ಶಿಕ್ಷೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳ ಸಜೆ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಮಗುವಿನ ಖರ್ಚು ಮತ್ತು ಪುನರ್ವಸತಿಗೆ ಸಂಬಂಧಪಟ್ಟಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದೊಂದಿಗೆ ಸರಿಯಾದ ಪರಿಹಾರ ಮೊತ್ತ ನಿರ್ಧರಿಸಲು ಕೋರ್ಟ್ ಶಿಫಾರಸು ಮಾಡಿದೆ.







