ಕರ್ಣಾಟಕ ಬ್ಯಾಂಕ್‌ನಿಂದ ಕದ್ರಿ ಪಾರ್ಕ್‌ಗೆ ನೈಸರ್ಗಿಕ ಬೆಳಕು!
18 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ವಿದ್ಯುತ್ ಸೌಲಭ್ಯ

ಮಂಗಳೂರು,ಆ. 16: ನಗರದ ಅತೀ ದೊಡ್ಡ ಹಾಗೂ ಸುಂದರ ಪಾರ್ಕ್‌ಗಳಲ್ಲಿ ಒಂದಾಗಿರುವ ಕದ್ರಿ ಪಾರ್ಕ್ ಕೊನೆಗೂ ಬೆಳಗುವಂತಾಗಿದೆ. ಪಾರ್ಕ್‌ನ ಕಾಲುದಾರಿಯ ಉದ್ದಕ್ಕೂ ನಗರದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕರ್ಣಾಟಕ ಬ್ಯಾಂಕ್ ವತಿಯಿಂದ ಇದೀಗ 18 ಲಕ್ಷ ರೂ. ವೆಚ್ಚದಲ್ಲಿ 60 ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಆ ಮೂಲಕ ಪಾರ್ಕ್‌ಗೆ ನೈಸರ್ಗಿಕ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಸೋಲಾರ್ (ಸೌರ) ದೀಪಗಳ ಉದ್ಘಾಟನೆಯನ್ನು ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಜಯರಾಂ ಭಟ್ ಮಂಗಳವಾರ ನೆರವೇರಿಸಿದರು. ಕರ್ಣಾಟಕ ಬ್ಯಾಂಕ್ ಈ ಯೋಜನೆಯನ್ನು ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್)ಯಲ್ಲಿ ಪ್ರಾಯೋಜಿಸಿದ್ದು, ಪಾರ್ಕ್‌ಗೆ ರೇಡಿಯೋ ಕೂಡಾ ಈ ಹಿಂದೆಯೇ ಒದಗಿಸಲಾಗಿದ್ದು ಅದು ಕೂಡಾ ಬಳಕೆಯಾಗುತ್ತಿದೆ ಎಂದರು. ಮಂಗಳೂರು ನಗರ ಸುಂದರೀಕರಣದ ನಿಟ್ಟಿನಲ್ಲಿ ಬ್ಯಾಂಕ್ ತನ್ನ ಸಿಎಸ್‌ಆರ್‌ನಡಿ ಈಗಾಗಲೇ ಹಲವಾರು ರೀತಿಯ ಕೊಡುಗೆಗಳನ್ನು ನೀಡಿದೆ. ವೆನ್‌ಲಾಕ್ ಆಸ್ಪತ್ರೆಗೆ 16 ಲಕ್ಷ ರೂ. ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರ, 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಭಜಕಗಳನ್ನು ಒದಗಿಸಲಾಗಿದೆ ಎಂದವರು ಹೇಳಿದರು. ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ರಾಜ್ಯದಲ್ಲಿ ರೂಪ್ ಟಾಪ್ ಸೋಲಾರ್ ಪ್ಯಾನಲ್ ಅಳವಡಿಕೆಯ ಮೂಲಕ ವಿದ್ಯುತ್ ಉತ್ಪತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೆ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸರಕಾರಿ ಕಟ್ಟಡಗಳಿಗೂ ಸೋಲಾರ್ ವಿದ್ಯುತ್ ಬಳಕೆ ಕಡ್ಡಾಯಗೊಳಿಸಲಾಗಿದೆ ಎಂದರು. ಶಾಸಕ ಜೆ.ಆರ್. ಲೋಬೊ ಮಾತನಾಡಿ, ಕೆಲ ವರ್ಷಗಳ ಹಿಂದೆ ಮರುಭೂಮಿಯಂತಿದ್ದ ಕದ್ರಿ ಪಾರ್ಕ್ ಇದೀಗ ನವಚೈತನ್ಯವನ್ನು ಪಡೆದುಕೊಂಡಿದೆ. ಪಾರ್ಕ್‌ನ ಪ್ರವೇಶ ದ್ವಾರವನ್ನು ಸುಂದರಗೊಳಿಸುವ ಕಾರ್ಯದ ಜತೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿತ್ತಾದರೂ ಸಂಜೆ ಹೊತ್ತು ಪಾರ್ಕ್‌ನಲ್ಲಿ ನಡೆದಾಡುವವರು (ವಾಕಿಂಗ್) ಬೆಳಕಿನ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸಬೇಕಾಗಿತ್ತು. ಇದೀಗ ಆ ತೊಂದರೆಯನ್ನು ಕರ್ಣಾಟಕ ಬ್ಯಾಂಕ್ ಮೂಲಕ ನಿವಾರಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಪಂ ಸಿಇಒ ಪಿ.ಐ. ಶ್ರೀವಿದ್ಯಾ ಮಾತನಾಡಿ, ಕರ್ಣಾಟಕ ಬ್ಯಾಂಕ್‌ನ ಕೊಡುಗೆಯಾದ ಸೌರ ವಿದ್ಯುತ್ ದೀಪಗಳನ್ನು ನಿರಂತರವಾಗಿ ನಿರ್ವಹಣೆ ಮಾಡುವ ಮೂಲಕ ಸುಸ್ಥಿತಿಯಲ್ಲಿಡಬೇಕಾಗಿದೆ ಎಂದರು.
ಕದ್ರಿ ಪಾರ್ಕ್‌ನ ಮಧ್ಯದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹೈಮಾಸ್ಟ್ ವಿದ್ಯುತ್ ದೀಪವನ್ನು ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಕೊಡುಗೆಯಲ್ಲಿ ಅದಕ್ಕೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿ ಸೋಲಾರ್ ವಿದ್ಯುತ್ ಉತ್ಪತ್ತಿಯ ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀವಿದ್ಯಾ ತಿಳಿಸಿದರು. ಕರ್ಣಾಟಕ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ ದೇಶಪಾಂಡೆ, ವಲಯ ಮುಖ್ಯಸ್ಥ ನಾಗರಾಜ್ ಆರ್. ಹೆಬ್ಬಾರ್, ಮಂಗಳೂರು ಕೊಡಿಯಾಲ್‌ಬೈಲ್ ಶಾಖೆಯ ಮುಖ್ಯ ಪ್ರಬಂಧಕ ಸ್ಯಾಂಡ್ರಾ ಮರಿಯ ಲೊರೆನ್ಹಾ, ಮಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕ ಶೋಭಾರಾವ್ ಪಿ., ಬ್ಯಾಂಕ್‌ನ ಮಂಗಳೂರು ವಲಯದ ಶಾಖಾ ಪ್ರಮುಖರು ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ವಂದಿಸಿದರು.
ಆಟೊ ಸೆನ್ಸಾರ್ ಆಪರೇಟಿವ್
ಮಾಸಿಕ 9,000 ರೂ. ಉಳಿತಾಯ!
ಕದ್ರಿ ಪಾರ್ಕ್‌ನಲ್ಲಿ ಅಳವಡಿಸಲಾಗಿರುವ ಸೌರ ವಿದ್ಯುತ್ ದೀಪಗಳನ್ನು ಉರಿಸಲು ಹಾಗೂ ನಂದಿಸುವ ಕಾರ್ಯಕ್ಕೆ ನಿರ್ವಾಹಕರ ಅಗತ್ಯವಿಲ್ಲ. ದೀಪಗಳಿಗೆ ಅಟೊ ಸೆನ್ಸಾರ್ ಅಳವಡಿಸಲಾಗಿರುವುದರಿಂದ ಸಂಜೆ ಸೂರ್ಯನ ಬೆಳಕು ಮಂಜಾಗುತ್ತಿರುವಂತೆಯೇ ದೀಪಗಳು ಬೆಳಗಿ, ಬೆಳಗ್ಗೆ ಸೂರ್ಯ ಉದಯಿಸಿ ಬೆಳಕು ಹರಿಯುತ್ತಿರುವಂತೆಯೇ ದೀಪಗಳು ಆರಲಿವೆ. ಅಲ್ಲದೆ ಈ ಸೋಲಾರ್ ವಿದ್ಯುತ್ ದೀಪಗಳಿಂದಾಗಿ ಸರಕಾರಕ್ಕೆ ಮಾಸಿಕ ಕನಿಷ್ಠ 9,000 ರೂ.ಗಳ ವಿದ್ಯುತ್ ಉಳಿತಾಯವಾಗಲಿದೆ. ಪಾರ್ಕ್‌ನಲ್ಲಿ ಸೋಲಾರ್ ವಿದ್ಯುತ್‌ನ ಜತೆಗೆ ಎಲ್‌ಇಡಿ ಬಲ್ಪ್‌ಗಳನ್ನು ಉಪಯೋಗಿಸುವ ಮೂಲಕ ವಿದ್ಯುತ್ ಉಳಿತಾಯಕ್ಕೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ಮುಖ್ಯ ಮಹಾ ಪ್ರಬಂಧಕ ಮಹಾಬಲೇಶ್ವರ ಎಂ.ಎಸ್. ತಿಳಿಸಿದರು.







