ಬ್ಯಾಡ್ಮಿಂಟನ್: ಪದಕದ ನಿರೀಕ್ಷೆ ಮೂಡಿಸಿದ ಸಿಂಧು
ವಿಶ್ವ ನಂ. 2 ಆಟಗಾರ್ತಿಯನ್ನು ಸೋಲಿಸಿ ಸೆಮಿಫೈನಲ್ ಗೆ

ರಿಯೊ ಡಿ ಜನೈರೊ,ಆ.17: ಲಂಡನ್ ಒಲಿಂಪಿಕ್ಸ್ ಬೆಳ್ಳಿಪದಕ ವಿಜೇತೆ ಹಾಗೂ ವಿಶ್ವದ ನಂಬರ್ 2 ಆಟಗಾರ್ತಿ ಚೀನಾದ ವಾಂಗ್ ಯಿಹಾನ್ ವಿರುದ್ಧ ಅದ್ಭುತ ನಿರ್ವಹಣೆ ತೋರಿದ ಭಾರತದ ಪಿ.ವಿ,ಸಿಂಧು ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಯಿಹಾನ್ ವಿರುದ್ಧ ಕಠಿಣ ಪಂದ್ಯದಲ್ಲಿ 22-20, 21-19 ನೇರ ಸೆಟ್ಟುಗಳ ಜಯ ದಾಖಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಸೆಮಿಫೈನಲ್‌ನಲ್ಲಿ ಸಿಂಧು ಜನಾಪ್‌ನ ಅಕಾನೆ ಯಮಗುಚಿ ಅಥವಾ ನೊಝೋಮಿ ಒಕುರಾ ವಿರುದ್ಧ ಸೆಣೆಸಲಿದ್ದಾರೆ. ಭಾರತದ ಸೈನಾ ನೆಹ್ವಾಲ್ ಬಳಿಕ, ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಸಿಂಧು ಪಾತ್ರರಾದರು.
ಎರಡನೇ ಸೆಟ್‌ನಲ್ಲಿ 18-13 ಮುನ್ನಡೆಯಲ್ಲಿದ್ದ ಸಿಂಧುಗೆ, ಚೀನಾ ಆಟಗಾರ್ತಿ ಆಘಾತ ನೀಡಿ ನಿರಂತರ ಐದು ಅಂಕ ಸಂಪಾದಿಸಿ, 18-18 ಸಮಬಲ ಸಾಧಿಸಿದರು. ಕೊನೆಗೂ 21-19ರಿಂದ ಸೆಟ್ ಗೆಲ್ಲುವಲ್ಲಿ ಸಿಂಧು ಸಫಲರಾದರು.
ಈ ಮಧ್ಯೆ ಒಂದೇ ದಿನ 10 ಪದಕ ಗೆದ್ದ ಸಾಧನೆಯೊಂದಿಗೆ ಬ್ರಿಟನ್ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ. ಬ್ರಿಟನ್ 19 ಚಿನ್ನ, 19 ಬೆಳ್ಳಿ ಹಾಗೂ 12 ಕಂಚಿನ ಪದಕಗಳೊಂದಿಗೆ 50 ಪದಕ ಗೆದ್ದಿದ್ದು, ಅಮೆರಿಕ 28 ಚಿನ್ನ, 28 ಬೆಳ್ಳಿ, 27 ಕಂಚಿನೊಂದಿಗೆ ಅಗ್ರಸ್ಥಾನಿಯಾಗಿದೆ.







